ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿ ದಿಕ್ಕು ಬದಲಾವಣೆ ಮಾಡಿಕೊಂಡ ಪರಿಣಾಮ ರಾಜ್ಯದ ಕರಾವಳಿ ಪ್ರದೇಶ ಸೇರಿ ಹಲವೆಡೆ ಮಳೆಯಾಗುತ್ತಿದೆ. ನಿನ್ನೆ ಮಧ್ಯಾಹ್ನದಿಂದಲೂ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗುತ್ತಿದ್ದು, ಚಿತ್ರದುರ್ಗದಲ್ಲಿ ಧಾರಾಕಾರ ಮಳೆಯಾಗಿದೆ.
ಚಿತ್ರದುರ್ಗದಲ್ಲಿ ಭಾರೀ ಮಳೆಯ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ರಸ್ತೆ ಮೇಲೆ ಎರಡು ಮೂರು ಅಡಿಗಳಷ್ಟು ನೀರು ಹರಿದಿದೆ. ಹಲವು ಕಡೆಮನೆ ರಸ್ತೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದಲ್ಲಿ ಸಿಡಿಲು ಬಡಿದು 20 ವರ್ಷದ ಗುರುನಾಥ ನಾರ್ವೇಕರ್ ಮೃತಪಟ್ಟಿದ್ದಾರೆ. ಬೆಳಗಾವಿ ನಗರ, ಚಿತ್ರದುರ್ಗ ಜಿಲ್ಲೆ, ಭದ್ರಾವತಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಇನ್ನು ಎರಡು ಮೂರು ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.