ರಾಯಚೂರು: ರಾಜ್ಯದಲ್ಲಿ ನಿರಂತರ ಮಳೆ ಮತ್ತು ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಪರಿಣಾಮ ಶಾಖೋತ್ಪನ್ನ ಕೇಂದ್ರಗಳಿಗೆ ತೇವಗೊಂಡ ಕಲ್ಲಿದ್ದಲು ಪೂರೈಕೆ ಆಗುತ್ತಿದ್ದು, ಇದರ ಪರಿಣಾಮ RTPS ನ ಎರಡು ಮತ್ತು ಬಿಟಿಪಿಎಸ್ ನ ಒಂದು ವಿದ್ಯುತ್ ಉತ್ಪಾದನೆ ಘಟಕಗಳು ಸ್ಥಗಿತಗೊಂಡಿವೆ.
ರಾಜ್ಯದ ಎಲ್ಲಾ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲು ಗಣಿಗಳಿಂದ ರೈಲಿನ ಮೂಲಕ ಕಲ್ಲಿದ್ದಲು ಸರಬರಾಜು ಮಾಡಲಾಗುತ್ತದೆ. ತೆರೆದ ವ್ಯಾಗನ್ ಗಳಲ್ಲಿ ಕಲ್ಲಿದ್ದಲು ಪೂರೈಕೆ ಮಾಡುವುದರಿಂದ ಮಳೆಯಿಂದಾಗಿ ಕಲ್ಲಿದ್ದಲು ತೇವಗೊಂಡು ಹಸಿಯಾಗುತ್ತಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗಿದೆ.
ಈಗಾಗಲೇ ಶೇಖರಣೆಯಾದ ಕಲ್ಲಿದ್ದಲನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಕೆಲವು ಘಟಕಗಳು ತಾಂತ್ರಿಕ ಸಮಸ್ಯೆಯ ಕಾರಣ ಸ್ಥಗಿತಗೊಂಡಿವೆ. ಇದರ ಪರಿಣಾಮ ವಿದ್ಯುತ್ ಉತ್ಪಾದನೆ ಮೇಲೆ ಉಂಟಾಗಿದ್ದು, ಪ್ರಸ್ತುತ ಆರ್.ಟಿ.ಪಿ.ಎಸ್.ನಲ್ಲಿ 1.33 ಲಕ್ಷ ಮೆಟ್ರಿಕ್ ಟನ್, ವೈಟಿಪಿಎಸ್ ನಲ್ಲಿ 28000 ಮೆಟ್ರಿಕ್ ಟನ್, ಬಿಟಿಪಿಎಸ್ ನಲ್ಲಿ 95,000 ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಇದೆ. ವಾರದವರೆಗೆ ಈ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ಆಗಲಿದ್ದು, ಮಳೆ ಕಡಿಮೆಯಾಗಿ ಉತ್ತಮ ಕಲ್ಲಿದ್ದಲು ಸರಬರಾಜುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.