ಮೈಸೂರು: ಸಹಕಾರ ಕ್ಷೇತ್ರದಲ್ಲಿಯೂ ಮೀಸಲಾತಿ ಜಾರಿಗೊಳಿಸುವ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಎಲ್ಲಾ ವರ್ಗದವರಿಗೂ ಅವಕಾಶ ದೊರೆಯಬೇಕೆಂಬ ಉದ್ದೇಶದಿಂದ ಸಹಕಾರ ಕ್ಷೇತ್ರದ ನಾಮನಿರ್ದೇಶನ, ನೇಮಕಾತಿ, ಸಾಲ ವಿತರಣೆಯಲ್ಲಿ ಮೀಸಲಾತಿ ನೀಡಬೇಕೆನ್ನುವ ಬೇಡಿಕೆ ಬಹಳ ದಿನಗಳಿಂದ ಇದೆ ಎಂದು ಹೇಳಿದ್ದಾರೆ.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ನೀಡುವ ಕುರಿತು ವರದಿ ನೀಡಲು ಕೆ.ಹೆಚ್. ರಂಗನಾಥ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ನೇಮಕ ಮಾಡಲಾಗಿತ್ತು. ಆದರೆ, ಅವಧಿಗೆ ಆರು ತಿಂಗಳ ಮೊದಲೇ ವಿಧಾನಸಭೆ ಚುನಾವಣೆ ನಡೆದ ಕಾರಣ ಅದು ಕಾರ್ಯಗತಗೊಳ್ಳಲಿಲ್ಲ. ಈಗ ಮೀಸಲಾತಿ ನೀಡುವ ಕುರಿತಾಗಿ ಸಾಧಕ ಬಾಧಕಗಳ ಬಗ್ಗೆ ನ್ಯಾ. ನಾಗಮೋಹನ್ ದಾಸ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಸಂಪೂರ್ಣ ಮಾಹಿತಿ ಪಡೆದ ನಂತರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.