ಬೆಂಗಳೂರು: ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಯುವುದನ್ನು ತಡೆದು ಅರ್ಹ ಅಭ್ಯರ್ಥಿಗಳಿಗೆ ಆಗುವ ಅನ್ಯಾಯ ಸರಿಪಡಿಸಲು ಒಂದೇ ವೇದಿಕೆಯಡಿ ನೇಮಕಾತಿ ಪರೀಕ್ಷೆ ನಡೆಸಲು ಸಹಕಾರ ಪರೀಕ್ಷಾ ಪ್ರಾಧಿಕಾರ ರಚಿಸಲು ಸಹಕಾರ ಇಲಾಖೆ ಮುಂದಾಗಿದೆ.
ಈ ಮೂಲಕ ಸಹಕಾರ ಇಲಾಖೆಯ ಸಂಸ್ಥೆಗಳ ನೇಮಕಾತಿಯಲ್ಲಿ ನಡೆಯುವ ಅಕ್ರಮ ತಡೆಯಲು ಸರ್ಕಾರ ಕ್ರಮ ಕೈಗೊಂಡಿದೆ. ಸಹಕಾರ ಪರೀಕ್ಷಾ ಪ್ರಾಧಿಕಾರದ ಮೂಲಕ ಸಹಕಾರ ಇಲಾಖೆ ವ್ಯಾಪ್ತಿಯ ಕೆಎಂಎಫ್, ಶಿವಮೊಗ್ಗ, ತುಮಕೂರು, ಹಾಸನ, ದಕ್ಷಿಣ ಕನ್ನಡ, ಬೆಳಗಾವಿ, ಬೆಂಗಳೂರು, ಬಳ್ಳಾರಿ, ವಿಜಯಪುರ, ಚಾಮರಾಜನಗರ, ಕೋಲಾರ ಮೊದಲಾದ ಹಾಲು ಒಕ್ಕೂಟಗಳು, ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಕೋ ಆಪರೇಟಿವ್ ಸೊಸೈಟಿ, ಪಟ್ಟಣ ಸಹಕಾರ ಬ್ಯಾಂಕ್, ಸಹಕಾರ ಮಹಾಮಂಡಲ ಮೊದಲಾದವುಗಳಲ್ಲಿ ನಡೆಯುವ ಎಲ್ಲಾ ನೇಮಕಾತಿಗಳನ್ನು ಒಂದೇ ವೇದಿಕೆಯಡಿ ತರಲು ಸರ್ಕಾರ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಸಹಕಾರ ಪರೀಕ್ಷಾ ಪ್ರಾಧಿಕಾರ ರಚಿಸಲಿದೆ.
ಇಂತಹ ಸಂಸ್ಥೆಗಳಲ್ಲಿ ನೇಮಕಾತಿ ನಡೆಯುವ ಸಂದರ್ಭದಲ್ಲಿ ಅಕ್ರಮಗಳು ನಡೆಯುತ್ತಿವೆ. ಆರ್.ಬಿ.ಐ. ವ್ಯಾಪ್ತಿಯ ಎಲ್ಲಾ ಬ್ಯಾಂಕುಗಳಲ್ಲಿ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ನಡೆಯುತ್ತಿದ್ದು, ಅದೇ ಮಾದರಿಯಲ್ಲಿ ರಾಜ್ಯದ ಸಹಕಾರಿ ಇಲಾಖೆ ವ್ಯಾಪ್ತಿಯ ಎಲ್ಲಾ ಸಹಕಾರ ಸಂಸ್ಥೆಗಳಲ್ಲಿನ ನೇಮಕಾತಿಯನ್ನು ಸಹಕಾರಿ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲಾಗುವುದು. ಇದರಿಂದಾಗಿ ಪರೀಕ್ಷೆಗಳಲ್ಲಿ ಅಕ್ರಮ ತಡೆದು ಅರ್ಹ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.