ಬೆಂಗಳೂರು: ರಾಜ್ಯದ ಕೆಲವು ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಉಂಟಾದ ಹಿನ್ನೆಲೆಯಲ್ಲಿ ಫೆಬ್ರವರಿ 16 ರವರೆಗೂ ಪದವಿ ಕಾಲೇಜುಗಳಿಗೆ ರಜೆ ಮುಂದುವರೆಸಲಾಗಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದ್ದ ರಜೆಯನ್ನು ಫೆಬ್ರವರಿ 16 ರವರೆಗೆ ವಿಸ್ತರಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಈ ಬಗ್ಗೆ ಮಾಹಿತಿ ನೀಡಿದ್ದು, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ವಿಶ್ವವಿದ್ಯಾಲಯಗಳು, ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ಅನ್ವಯವಾಗುವಂತೆ ಫೆಬ್ರವರಿ 16 ರವರೆಗೆ ರಜೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಕಾಲೇಜುಗಳಿಗೆ ರಜೆ ನೀಡಿದ್ದರೂ ಆನ್ಲೈನ್ ತರಗತಿಗಳು ಎಂದಿನಂತೆ ನಡೆಯಲಿವೆ. ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಿಗದಿಯಂತೆಯೇ ಪರೀಕ್ಷೆಗಳು ನಡೆಯಲಿವೆ ಎಂದು ಸಚಿವರು ಹೇಳಿದ್ದಾರೆ.