ಎಟಿಎಂಗಳ ಸಂಖ್ಯೆ ಮತ್ತು ಚಿಲ್ಲರೆ ಪಿಕ್-ಅಪ್ ಪಾಯಿಂಟ್‌ಗಳ ವಿಷಯದಲ್ಲಿ ದೇಶದ ಅತಿದೊಡ್ಡ ನಗದು ನಿರ್ವಹಣಾ ಕಂಪನಿಯಾದ ಸಿಎಂಎಸ್ ಇನ್ಫೋ ಸಿಸ್ಟಮ್ಸ್ ನ ಷೇರುಗಳು ದುರ್ಬಲಗೊಂಡಿವೆ. ಇಶ್ಯೂ ಬೆಲೆಗೆ ಹೋಲಿಸಿದರೆ ಅದರ ಷೇರುಗಳು ಕೇವಲ ಶೇಕಡಾ 1.94ರಷ್ಟು ಪ್ರೀಮಿಯಂನಲ್ಲಿ ಎನ್ಎಸ್ಇ ನಲ್ಲಿ ಪಟ್ಟಿ ಮಾಡಲ್ಪಟ್ಟಿವೆ. ಅದರ ಐಪಿಒ ಬೆಲೆ 216 ಆಗಿತ್ತು. ಆದರೆ ಎನ್ಎಸ್ಇನಲ್ಲಿ 220.20 ರಷ್ಟು ಅಂದ್ರೆ ಶೇಕಡಾ 1.94 ರಷ್ಟು ಲಾಭದೊಂದಿಗೆ ವ್ಯವಹಾರ ನಡೆಸುತ್ತಿದೆ.
ಇನ್ನು ಬಿಎಸ್ಇನಲ್ಲಿ ಕೇವಲ ಶೇಕಡಾ 1.16ರಷ್ಟು ಅಂದರೆ 218.50 ರ ಪ್ರೀಮಿಯಂನಲ್ಲಿ ಪಟ್ಟಿಮಾಡಲಾಗಿದೆ. ಸಿಎಂಎಸ್ ಇನ್ಫೋಸಿಸ್ಟಮ್ಸ್ ನ 1100 ಕೋಟಿ ಐಪಿಒ ಸಂಪೂರ್ಣವಾಗಿ ಮಾರಾಟಕ್ಕೆ ಬಿಡುಗಡೆಯಾಗಿದೆ. ಸಿಎಂಎಸ್ ಯಾವುದೇ ಹೊಸ ಷೇರುಗಳನ್ನು ನೀಡಿಲ್ಲ. ಡಿಸೆಂಬರ್ 21-23ರ ನಡುವೆ ಹೂಡಿಕೆಗೆ ಅವಕಾಶ ನೀಡಲಾಗಿತ್ತು. ಷೇರಿನ ಗಾತ್ರದ ಆಧಾರದ ಮೇಲೆ 205ರಿಂದ 216 ರೂಪಾಯಿಗೆ ಷೇರುಗಳನ್ನು ಹಂಚಲಾಗಿತ್ತು. ಪ್ರತಿ ಷೇರಿನ ಮುಖಬೆಲೆ 10 ರೂಪಾಯಿಯಾಗಿದೆ.
ಕಂಪನಿಯ ನಿವ್ವಳ ಲಾಭ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ನಿರಂತರವಾಗಿ ಹೆಚ್ಚುತ್ತಿದೆ. 2019 ರ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಲಾಭವು 96.14 ಕೋಟಿ ರೂಪಾಯಿಗಳಾಗಿದ್ದು, 2020 ರಲ್ಲಿ 134.71 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಂಪನಿಯ ನಿವ್ವಳ ಲಾಭವು ಕಳೆದ ಹಣಕಾಸು ವರ್ಷದಲ್ಲಿ ಅಂದ್ರೆ 2021 ರಲ್ಲಿ 168.52 ಕೋಟಿ ರೂಪಾಯಿಯಾಗಿದೆ.