ಬೆಂಗಳೂರು : ಈ ವಾರವೇ ಬೆಳೆಹಾನಿ ಪರಿಹಾರದ ಮೊದಲ ಕಂತು 2000 ರೂ. ಜಮಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ ‘ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಣೆ ಮಾಡಿದ್ದು, ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ಸಾಗಿದೆ. ಮಳೆ ಕೊರತೆಯಿಂದಾಗಿ ಈ ಬಾರಿ ಒಟ್ಟು 48 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಇದರಿಂದಾಗಿ ಲಕ್ಷಾಂತರ ರೈತರು ಆರ್ಥಿಕ ಸಮಸ್ಯೆಗೆ ತುತ್ತಾಗಿದ್ದಾರೆ. ಕೇಂದ್ರದ ನೆರವಿಗೆ ಕಾಯುತ್ತಾ ಕೂರದೆ ರೈತರ ಕಷ್ಟಕ್ಕೆ ತಕ್ಷಣ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ರೂ.2,000 ಮೊದಲ ಕಂತಿನ ಬೆಳೆನಷ್ಟ ಪರಿಹಾರಧನವನ್ನು ಈ ವಾರವೇ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಿದ್ದು, ಚಳ್ಳಕೆರೆ ತಾಲೂಕಿನಿಂದ ಚಾಲನೆ ನೀಡಲಾಗುವುದು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನೊಂದ ಜೀವಗಳಿಗಾಗಿ ಸಾಂತ್ವನ ಯೋಜನೆಯನ್ನು ಜಾರಿಗೆ ತಂದು, ನೆಮ್ಮದಿಯ ಬದುಕು ಕಲ್ಪಿಸಲಾಗುತ್ತಿದೆ.ಕೋಮು ಗಲಭೆ ಮತ್ತು ಕೋಮು ಹಿಂಸಾಚಾರದ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ರೂ. 5 ಲಕ್ಷದ ವರೆಗೆ ನಿಗಮದಿಂದ ಸಾಲ / ಸಹಾಯಧನ ನೀಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.