![](https://kannadadunia.com/wp-content/uploads/2019/03/siddu-cm-hasan-cong.jpg)
ಕೊಪ್ಪಳ : ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಆಗುವವರೆಗೂ ರೈತರಿಗೆ 2 ಸಾವಿರ ತಕ್ಷಣಕ್ಕೆ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಣ್ಣ ಪುಟ್ಟ ಸಮಸ್ಯೆಗಳಿಗೂ ಕೋಲಾರದ ಜನ ನನ್ನ ಬಳಿಗೆ ಬಂದರೆ ಇಲ್ಲಿ ಜಿಲ್ಲಾಡಳಿತ ವಿಫಲ ಎಂದೇ ಪರಿಗಣಿಸಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಜನರ ಹಣದಲ್ಲಿ ಅಧಿಕಾರಿಗಳಿಗೆ ಸವಲತ್ತುಗಳು ಸಿಗುತ್ತಿವೆ. ಆದ್ದರಿಂದ ನಾವು ಜನರ ಪರವಾಗಿರಬೇಕು. ರೈತರನ್ನು ಪೊಲೀಸ್ ಮತ್ತು ಇತರೆ ಇಲಾಖೆ ಅಧಿಕಾರಿಗಳು ಸತಾಯಿಸಬಾರದು. ಇದನ್ನು ನಾನು ಸಹಿಸಲ್ಲ. ಇದನ್ನು ಎಸ್.ಪಿ ಗಳು ಗಮನಿಸಬೇಕು. ಎಸ್.ಪಿ ಗಳು ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೋಲಾರ ಜಿಲ್ಲೆ ಪ್ರಗತಿ ಸಾಧಿಸಬೇಕು. ಆರೋಗ್ಯ ಮತ್ತು ಶಿಕ್ಷಣದಲ್ಲಿ ಮುಂದಿರಬೇಕು. ಮಕ್ಕಳಲ್ಲಿ ಅನಿಮೀಯ, ರಕ್ತ ಹೀನತೆ 0.6℅ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಏನು ಕ್ರಮ ಕೈಗೊಳ್ಳಲಾಗಿದೆ? ಅನಿಮಿಯ ಮುಕ್ತ ಕರ್ನಾಟಕ ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮ. ಇದನ್ನು ಪರಿಣಾಮಕರಿಯಾಗಿ ಜಾರಿ ಮಾಡಬೇಕು ಎಂದರು.
ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಲ್ಲಿ ನಾವು ಊಟ ಕೊಡುತ್ತಿದ್ದೇವೆ. ಆದರೂ ರಕ್ತಹೀನತೆ ಪ್ರಮಾಣ 0.6℅ ಹೆಚ್ಚಾಗಿದ್ದು ಏಕೆ ಎಂದು ಪರಿಶೀಲಿಸಿ, ತಕ್ಷಣ ಪರಿಹಾರ ಮಾಡಬೇಕು. 31 ಜಿಲ್ಲೆಗಳಲ್ಲಿ ತಲಾ ಆದಾಯದಲ್ಲಿ ಕೋಲಾರ 19ನೇ ಸ್ಥಾನದಲ್ಲಿದೆ ಏಕೆ? ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೊಣೆಯಾಗಿದ್ದು, ಮುಂದಿನ ಸಭೆಗಳಲ್ಲಿ ಇದೆಲ್ಲಾ ಸುಧಾರಿಸಿರಬೇಕು ಎಂದು ಸೂಚನೆ ನೀಡಿದ್ದಾರೆ.
ಸ್ಮಶಾನ ಮತ್ತು ಖಬರಸ್ತಾನಕ್ಕೆ ಅಗತ್ಯ ಜಾಗಗಳನ್ನು ಒದಗಿಸಬೇಕು. ಸರ್ಕಾರಿ ಸ್ಥಳ ಇಲ್ಲದಿದ್ದರೆ ಖರೀದಿಸಿ ಕೊಡಬೇಕು. ದಲಿತರು ಸೇರಿದಂತೆ ಯಾವುದೇ ಸಮುದಾಯ, ಧರ್ಮದವರಿಗೂ ಶವ ಸಂಸ್ಕಾರಕ್ಕೆ ತೊಂದರೆ ಆಗಕೂಡದು ಎಂದು ಹೇಳಿದ್ದಾರೆ.