ಬೆಂಗಳೂರು : ರಾಷ್ಟ್ರೀಯ ರೈತ ದಿನದಂದು ರಾಜ್ಯದ ಅನ್ನದಾತರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೃಷಿಭಾಗ್ಯ ಯೋಜನೆ ಸೇರಿ ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿರುವ ಯೋಜನೆಗಳು
ರೈತರ ಕೃಷಿ ಪಂಪ್ ಸೆಟ್ ಗಳಿಗೆ ತ್ರೀಪೇಸ್ ವಿದ್ಯುತ್
ಬರದ ಸಂಕಷ್ಟದ ನಡುವೆಯೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡುವ ಮೂಲಕ ನಮ್ಮ ಸರ್ಕಾರವು ನಾಡಿನ ರೈತರ ಹಿತ ಕಾಪಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಕ್ರಮ ಕೃಷಿಪಂಪ್ ಸೆಟ್ ಸಕ್ರಮ
ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ ನಾಡಿನ ರೈತರ 4 ಲಕ್ಷ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಮೂಲಕ, ಮೂಲಸೌಕರ್ಯಗಳನ್ನು ಒದಗಿಸಲಾಗುವುದು.
100 ಹೈ-ಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ
ಕೃಷಿ ಚಟುವಟಿಕೆಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ ಬಂಡವಾಳ ವೆಚ್ಚವನ್ನು ತಗ್ಗಿಸುವ ಹಾಗೂ ಅಧಿಕ ಇಳುವರಿ ರೈತರ ಕೈಸೇರುವಂತೆ ಮಾಡುವ ಸಲುವಾಗಿ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ರೂ.100 ಕೋಟಿ ವೆಚ್ಚದಲ್ಲಿ 100 ಹೈ-ಟೆಕ್ ಹಾರ್ವೆಸ್ಟರ್ ಹಬ್ ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.
ಕೃಷಿ ಭಾಗ್ಯ ಯೋಜನೆ
ಮುಂಬರುವ ದಿನಗಳಲ್ಲಿ ಮಳೆ ಕೊರತೆಯಾದರೂ ನಾಡಿನ ರೈತರ ಬೆಳೆಗಳಿಗೆ ನೀರಿನ ಅಭಾವ ಎದುರಾಗಬಾರದು ಎಂಬ ಸದಾಶಯದೊಂದಿಗೆ ರೂ. 100 ಕೋಟಿ ವೆಚ್ಚದಲ್ಲಿ ರಾಜ್ಯದ 106 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆಯನ್ನು ಮರುಜಾರಿ ಮಾಡುತ್ತಿದ್ದೇವೆ.
ರೈತರಿಗೆ ಬರಪರಿಹಾರ
ಭೀಕರ ಬರದಿಂದ ತತ್ತರಿಸಿರುವ ನಾಡಿನ ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ಮೊದಲ ಕಂತಿನ ಬರಪರಿಹಾರವಾಗಿ ರೂ. 2,000 ನಮ್ಮ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಅನುದಾನಕ್ಕೆ ಕಾಯದೆ, ರೈತರ ಹಿತಕಾಪಾಡುವ ಏಕೈಕ ಉದ್ದೇಶದಿಂದ ತಕ್ಷಣದ ನೆರವನ್ನು ಘೋಷಿಸಲಾಗಿದೆ. ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂಬ ವಾಗ್ದಾನವನ್ನು ರಾಷ್ಟ್ರೀಯ ರೈತರ ದಿನದ ಸಂದರ್ಭದಲ್ಲಿ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.