ಏ ನೀನೇನು ತಲೆಕೆಡಿಸಿಕೊಳ್ಳಬೇಡ, ನಮಗೆ ಗೊತ್ತಿದೆ ಸರ್ಕಾರ ಹೇಗೆ ನಡೆಸಬೇಕು ಎನ್ನುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆಗಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸಾರಿಗೆ ನೌಕರರ ಮುಷ್ಕರ ಕುರಿತಂತೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮುಷ್ಕರ ನಿರತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇನ್ಶೂರೆನ್ಸ್, ಪರ್ಮಿಟ್ ಲ್ಯಾಪ್ಸ್ ಆದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಏನಾದ್ರೂ ಅಪಾಯವಾದ್ರೆ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಸಿಎಂ ಗರಂ ಆಗಿದ್ದಾರೆ.
ಖಾಸಗಿ ವಾಹನಗಳ ಫಿಟ್ನೆಸ್ ಸರಿ ಇಲ್ಲದೇ ಜನರಿಗೆ ತೊಂದರೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದಾಗ ಸಿಎಂ ಗರಂ ಆಗಿದ್ದು ಏ ನೀನೇನು ತಲೆಕೆಡಿಸಿಕೊಳ್ಳಬೇಡ, ನೀನು ಜವಾಭ್ದಾರಿ ತಗೋಬೇಡ, ನಮಗೆ ಗೊತ್ತಿದೆ ಸರ್ಕಾರ ಹೇಗೆ ನಡೆಸಬೇಕು ಎನ್ನುವುದು ಸರ್ಕಾರ ನಡೆಸುವುದು ನಮಗೆ ಗೊತ್ತು ಎಂದು ಕೋಪಗೊಂಡು ಹೇಳಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯದಲ್ಲಿ ಜನಸಾಮಾನ್ಯರಿಗೆ ಭಾರೀ ತೊಂದರೆಯಾಗಿದ್ದು, ಉಪ ಚುನಾವಣೆ ಹೊತ್ತಲ್ಲಿ ನಡೆದಿರುವ ಈ ಬೆಳವಣಿಗೆಯಿಂದ ಸಿಎಂ ಒತ್ತಡಕ್ಕೆ ಒಳಗಾಗಿ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.
ಕೋಪಗೊಂಡರೂ ಮರುಕ್ಷಣದಲ್ಲೇ ಸಿಎಂ, ಮುಷ್ಕರ ಕೈಗೊಂಡ ನೌಕರರ ಜೊತೆ ಮತ್ತೊಮ್ಮೆ ಮಾತಾಡಿ ಸಮಸ್ಯೆ ಬಗೆಹರಿಸಲಾಗುವುದು. ಯಾವುದೇ ತೊಂದರೆ ಆಗದಂತೆ ವಾಹನಗಳ ಸಂಚಾರಕ್ಕೆ ನಮ್ಮ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.