ಬೆಂಗಳೂರು: ಸಾರಿಗೆ ನೌಕರರ ಜೊತೆ ಮಾತುಕತೆಯ ಪ್ರಶ್ನೆಯೇ ಇಲ್ಲ. ಕೆಲಸಕ್ಕೆ ಗೈರುಹಾಜರಾದ ಸಾರಿಗೆ ನೌಕರರಿಗೆ ವೇತನ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲಸಕ್ಕೆ ಗೈರು ಹಾಜರಾದ ಸಾರಿಗೆ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಬ್ಬ-ಹರಿದಿನಗಳಲ್ಲಿ ಜನರಿಗೆ ತೊಂದರೆ ನೀಡಿದ್ದಾರೆ. ಹೀಗಾಗಿ ಸಾರಿಗೆ ನೌಕರರನ್ನು ಕ್ಷಮಿಸುವುದಿಲ್ಲ. ನೌಕರರು ಒಂದು ತಿಂಗಳು ಬೇಕಾದರೂ ಮುಷ್ಕರ ಮುಂದುವರೆಸಲಿ ಎಂದು ಹೇಳುವ ಮೂಲಕ ಮುಷ್ಕರ ನಿರತ ನೌಕರರಿಗೆ ಶಾಕ್ ನೀಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ:
ಸಾರಿಗೆ ನೌಕರರಿಗೆ ಉಗಾದಿ ಹಬ್ಬದ ಸಂಭ್ರಮವೇ ಇಲ್ಲವಾಗಿದೆ. ವೇತನ ನೀಡದೆ ರಾಜ್ಯ ಸರ್ಕಾರ ಸತಾಯಿಸುತ್ತಿದೆ ಎಂದು ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ವೇತನ ನೀಡುವುದಿಲ್ಲ ಎಂದು ಸಿಎಂ ಹೇಳುವುದು ಸರಿಯಲ್ಲ. ಬಲವಂತದಿಂದ ಸಾರಿಗೆ ಬಸ್ ಗಳನ್ನು ಓಡಿಸಲಾಗುತ್ತಿದೆ. ಖಾಸಗಿ ಚಾಲಕರ ಮೂಲಕ ಬಸ್ ಓಡಿಸಲಾಗಿದೆ. ಈ ರೀತಿ ಬಸ್ ಓಡಿಸಿದರೆ ಸಕ್ಸಸ್ ಆಗಲ್ಲ. 1 ತಿಂಗಳು ನೌಕರರು ಸತ್ಯಾಗ್ರಹ ಮಾಡಿದರೂ ಬಗ್ಗುವುದಿಲ್ಲ ಎಂಬ ಮುಖ್ಯಮಂತ್ರಿಯವರ ಹೇಳಿಕೆ ದೌರ್ಜನ್ಯದ ಹೇಳಿಕೆಯಾಗಿದೆ. ದಂಡಿಸುವ ದಿಕ್ಕಿನೆಡೆ ರಾಜ್ಯ ಸರ್ಕಾರ ಮುಂದಾಗಬಾರದು. ಮೊಂಡು ವಾದ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.