ಶಿವಮೊಗ್ಗ: ಕೊರೋನಾ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ವಿವಿಧ ವರ್ಗದವರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಈಗಾಗಲೇ ಎರಡು ಪ್ಯಾಕೇಜ್ ನೀಡಿದ್ದು, ವಿವಿಧ ವರ್ಗದವರಿಗೆ ನೆರವು ನೀಡಲಾಗಿದೆ. ಅದೇ ರೀತಿ ಮತ್ತೊಂದು ವಿಶೇಷ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಭರವಸೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಪಂಚಾಯಿತಿ ಆವರಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಪರಿಹಾರ ಪ್ಯಾಕೇಜ್ ಗಳನ್ನು ಘೋಷಣೆ ಮಾಡಲಾಗಿದ್ದು, ಅಗತ್ಯವಾದರೆ ಮತ್ತೊಂದು ಪ್ಯಾಕೇಜ್ ಘೋಷಿಸುವುದಾಗಿ ಹೇಳಿದ್ದಾರೆ.
ಲಾಕ್ಡೌನ್ ಜಾರಿಯಾಗಿರುವುದರಿಂದ ಆದಾಯ ಕುಸಿತವಾಗಿದೆ. ಇದರ ನಡುವೆ ಹಣಕಾಸು ನಿರ್ವಹಣೆ ಮಾಡುತ್ತಿದೆ. ಲಾಕ್ ಡೌನ್ ಸಡಿಲಿಕೆ ನಂತರ ಆದಾಯ ಹೆಚ್ಚುವ ನಿರೀಕ್ಷೆ ಇದೆ. ಈಗಾಗಲೇ ಎರಡು ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಅಗತ್ಯವಾದರೆ ಮತ್ತೊಂದು ಪ್ಯಾಕೇಜ್ ನೀಡಲಾಗುವುದು. ಸಂಕಷ್ಟಕ್ಕೆ ಒಳಗಾದ ವರ್ಗದವರಿಗೆ ಅವರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮೂಲಕ ಹಣ ಜಮಾ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.