ಶಿವಮೊಗ್ಗ: ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಲಭ್ಯವಾಗಲಿದ್ದು, ಎಲ್ಲಾ ಜಿಲ್ಲೆಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ಶುಕ್ರವಾರ ಶಿಕಾರಿಪುರ ತಾಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕೋವಿಡ್ ಮುಂದಿನ ಒಂದು ವಾರದಲ್ಲಿ ಹತೋಟಿಗೆ ಬರುವ ನಿರೀಕ್ಷೆ ಹೊಂದಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೊರೋನಾ ಪ್ರಮಾಣ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾದ ಹಲವು ವರ್ಗಗಳ ಜನರಿಗೆ ಸರ್ಕಾರ ಈಗಾಗಲೇ ಆರ್ಥಿಕ ನೆರವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಫಲಾನುಭವಿಗಳ ಹಳೆ ಸಾಲ ಬಾಕಿಯನ್ನು ಬ್ಯಾಂಕುಗಳು ಯಾವುದೇ ಕಾರಣಕ್ಕೂ ಈ ಹಣದಿಂದ ಮುರಿದುಕೊಳ್ಳಬಾರದು. ಈ ರೀತಿ ಹಳೆ ಸಾಲ ಚುಕ್ತಾ ಮಾಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಪ್ರತಿಯೊಬ್ಬರ ಅರ್ಹ ಬಡವರಿಗೂ ಮನೆ ನಿರ್ಮಿಸಿ ನೀಡಬೇಕು. ಇದಕ್ಕಾಗಿ ಆಶ್ರಯ ನಿವೇಶನ ಲಭ್ಯವಿಲ್ಲದಿದ್ದರೆ, ನಿವೇಶನ ಖರೀದಿಸಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಪ್ರತಿ ಅರ್ಹರಿಗೂ ಮನೆಯನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ: ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು. ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಸಕಾಲದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ತಾಲೂಕಿನಲ್ಲಿ ಹಲವು ನೀರಾವರಿ ಯೋಜನೆಗಳು ನಿರೀಕ್ಷೆಯಂತೆ ಅನುಷ್ಟಾನಗೊಳ್ಳುತ್ತಿದೆ. ಉಡುಗುಣಿ ತಾಳಗುಂದ ಏತ ನೀರಾವರಿ ಯೋಜನೆ ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. ಕಸಬಾ ನೀರಾವರಿ ಯೋಜನೆ ಶೇ.50ರಷ್ಟು ಪೂರ್ಣಗೊಂಡಿದೆ. ಹೊಸಳ್ಳಿ-ಅಂಜನಾಪುರ ಯೋಜನೆಯ ಪೈಪ್ಲೈನ್ ಕಾರ್ಯ ನಡೆಯುತ್ತಿದೆ ಎಂದರು.
ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜು, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.