ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತಾಗಿ ಹೇಳಿಕೆ ನೀಡುತ್ತಿದ್ದ ಬಿಜೆಪಿ ಶಾಸಕ ಯತ್ನಾಳ್ ಗೆ ನೋಟಿಸ್ ನೀಡಲು ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಯಡಿಯೂರಪ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೂ ಈಸ್ ಯತ್ನಾಳ್ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರಶ್ನಿಸುವ ಮೂಲಕ ಯಡಿಯೂರಪ್ಪ ನಾಯಕತ್ವ ಬಗ್ಗೆ ಹೇಳಿಕೆ ನೀಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ವಿಷಯಗಳಿದ್ದರೂ ಪಕ್ಷದಲ್ಲಿ ಚರ್ಚಿಸಬೇಕು. ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ಪಕ್ಷದ ನಾಯಕರು ನಿಂತಿದ್ದಾರೆ. ನಾಯಕತ್ವ ಕುರಿತಾದ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದಲೇ ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ವಿಶೇಷ ಸಭೆ ನಡೆಸಲಾಗಿದೆ ಎನ್ನಲಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದು, ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಗೆಲುವಿಗೆ ಕಾರ್ಯತಂತ್ರ ರೂಪಿಸಿ ಜನಸೇವಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರವಾಗಿದ್ದು, ಅವರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಬೆಂಬಲಕ್ಕೆ ನಾಯಕರು ನಿಂತಿದ್ದಾರೆ.
ಈ ಮೂಲಕ ತವರಲ್ಲಿ ನಡೆದ ಕಾರ್ಯಕಾರಿಣಿ ಸಭೆ ಯಡಿಯೂರಪ್ಪ ನಾಯಕತ್ವಕ್ಕೆ ಮತ್ತಷ್ಟು ಬಲ ತಂದಿದ್ದು, ಇದೇ ಹುಮ್ಮಸ್ಸಿನಲ್ಲಿ ಇಂದು ಪಕ್ಷದ ಶಾಸಕರೊಂದಿಗೆ ಯಡಿಯೂರಪ್ಪ ವಿಭಾಗವಾರು ಸಭೆ ನಡೆಸಲಿದ್ದಾರೆ. ಶಾಸಕರ ಅಸಮಾಧಾನವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಸಭೆ ನಡೆಸಲಾಗುವುದು ಎಂದು ಹೇಳಲಾಗಿದೆ.