ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆ ಅಂತ್ಯವಾಗಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮಹಾನಗರದಗಳಿಂದ ಬರುವ ಜನರ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚನೆ ನೀಡಲಾಗಿದೆ.
ಹೊರಗಡೆಯಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸಬೇಕು. ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆ ನೀಗಿಸಬೇಕು. ಆಕ್ಸಿಜನ್ ಸಮಸ್ಯೆ ಇದ್ದರೆ ಮೊದಲೇ ಗಮನಕ್ಕೆ ತರಬೇಕು. ಲಸಿಕೆಗೆ ಬರುವವರನ್ನು ಆತಂಕಕ್ಕೆ ಗುರಿಪಡಿಸಬೇಡಿ. ಕೇಂದ್ರ ಸರ್ಕಾರದಿಂದ ಲಸಿಕೆ ಬಂದ ಕೂಡಲೇ ನಾವೇ ತಿಳಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ದಾವಣಗೆರೆ, ಮೈಸೂರು, ತುಮಕೂರು, ರಾಯಚೂರು, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಲಾಕ್ಡೌನ್ ಬಗ್ಗೆ ಸಿಎಂ ಯಾವುದೇ ತೀರ್ಮಾನಕ್ಕೆ ಬರದೆ ಸಂವಾದ ಮೊಟಕುಗೊಳಿಸಿದ್ದಾರೆ. ಲಾಕ್ಡೌನ್ ಬಗ್ಗೆ ಆರಂಭದಲ್ಲಿ ಸಿಎಂ ಸಲಹೆ ಕೇಳಿದ್ದರು. ನಂತರ ಲಾಕ್ಡೌನ್ ಬಗ್ಗೆ ಯಾವುದೇ ಸಲಹೆ ಕೇಳಿಲ್ಲ. ಸಮಯದ ನೆಪ ಹೇಳಿ ಅರ್ಧಕ್ಕೆ ಸಂವಾದ ಮೊಟಕುಗೊಳಿಸಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ವಾರಕ್ಕೆ ಎರಡು ಬಾರಿ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ.