ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ದೆಹಲಿ ಕಚೇರಿ ಪೂಜೆಯ ನೆಪದಲ್ಲಿ ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ. ಇದೇ ವೇಳೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಚರ್ಚೆ ನಡೆಸಲಾಗುವುದು ಎಂದು ಹೇಳಲಾಗಿದೆ.
ಈಗಾಗಲೇ ಸಚಿವ ಈಶ್ವರಪ್ಪ ದೆಹಲಿಯಲ್ಲಿದ್ದು, ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಆರ್. ಅಶೋಕ್ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ತೆರಳಲಿದ್ದಾರೆ. ಈ ಸಲದ ದೆಹಲಿ ಯಾತ್ರೆಯಿಂದ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಸುಳಿವು ಅರಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಕ್ಕಟ್ಟು ಶಮನಕ್ಕೆ ಮುಂದಾಗಿದ್ದಾರೆ. ಕೆಲವು ಸಚಿವರು ಹಾಗೂ ಶಾಸಕರಿಗೆ ನಿವಾಸಕ್ಕೆ ಬರುವಂತೆ ತಿಳಿಸಿದ್ದಾರೆ. ಆದರೆ, ಅವರಲ್ಲಿ ಅನೇಕರು ದೆಹಲಿಗೆ ಹೋಗಲೇಬೇಕೆಂದು ತಿಳಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲವೆಂದು ಬಿಜೆಪಿ ನಾಯಕರು ಹೇಳುತ್ತಿದ್ದರೂ, ಒಳಗೊಳಗೆ ಪ್ರಮುಖ ಬೆಳವಣಿಗೆ ನಡೆಯುತ್ತಿವೆ. ಯಡಿಯೂರಪ್ಪ ಕೆಳಗಿಳಿಯುವರು ಎಂದು ಕೆಲ ಶಾಸಕರೇ ಬಹಿರಂಗವಾಗಿಯೇ ಹೇಳಿದ್ದಾರೆ. ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದೆಲ್ಲ ಚರ್ಚೆಯಾಗುತ್ತಿದೆ. ಈ ದಿಢೀರ್ ಬೆಳವಣಿಗೆ ಸುಳಿವರಿತ ಯಡಿಯೂರಪ್ಪ ಬಿಕ್ಕಟ್ಟು ಶಮನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.