ಹಾವೇರಿ: ನಿನ್ನೆ ನಿಧನರಾದ ಬಿಜೆಪಿ ಹಿರಿಯ ಶಾಸಕ, ಮಾಜಿ ಸಚಿವ ಸಿ.ಎಂ. ಉದಾಸಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ವಿಶೇಷ ವಾಹನದಲ್ಲಿ ಹಾನಗಲ್ ಗೆ ತರಲಿದ್ದು, ವಿರಕ್ತಮಠದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 85 ವರ್ಷದ ಸಿ.ಎಂ. ಉದಾಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಹಾನಗಲ್ ವಿಧಾನಸಭೆ ಕ್ಷೇತ್ರದಿಂದ 9 ಬಾರಿ ಸ್ಪರ್ಧಿಸಿದ್ದ ಉದಾಸಿ ಆರು ಬಾರಿ ಶಾಸಕರಾಗಿದ್ದರು. ರಾಮಕೃಷ್ಣ ಹೆಗಡೆ, ಜೆ.ಹೆಚ್. ಪಟೇಲ್, ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಸಂಜೆ 4 ಗಂಟೆಗೆ ಸಿ.ಎಂ. ಉದಾಸಿ ಅಂತ್ಯಕ್ರಿಯೆ ಹಾವೇರಿ ಜಿಲ್ಲೆ ಹಾನಗಲ್ ವಿರಕ್ತಮಠದ ರುದ್ರಭೂಮಿಯಲ್ಲಿ ಲಿಂಗಾಯತ ವಿಧಿವಿಧಾನದ ಪ್ರಕಾರ ನಡೆಯಲಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಅಂತಿಮ ದರ್ಶನದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು ಎನ್ನಲಾಗಿದೆ.