ಬೆಂಗಳೂರು: ಸಚಿವ ಸಂಪುಟದ ಪೂರ್ವ ಅನುಮೋದನೆ ಇಲ್ಲದೆ ರಾಜ್ಯ ವಿಧಾನ ಮಂಡಲದಲ್ಲಿ ವಿಧೇಯಕ ಮಂಡಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲು ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿತರಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಶುಕ್ರವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಸಚಿವ ಸಂಪುಟದ ಪೂರ್ವ ಅನುಮೋದನೆ ಇಲ್ಲದ ವಿಧಾನ ಮಂಡಲದಲ್ಲಿ ವಿಧೇಯಕ ಮಂಡಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲು ತಿದ್ದುಪಡಿ ಮಾಡಲಾಗಿದೆ. ಜತೆಗೆ ಇಂತಹ ಪ್ರಸ್ತಾವನೆಗಳಿಗೆ ಘಟನೋತ್ತರ ಮಂಜೂರಾತಿ ಪಡೆಯಲು ಸಹ ತಿದ್ದುಪಡಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಇತ್ತೀಚೆಗೆ ಕಳುಹಿಸಿದ್ದ ಕೆಲವು ಪ್ರಸ್ತಾವನೆಗಳಲ್ಲಿ ಸಂಪುಟ ಸಭೆಯ ಅನುಮೋದನೆ ಪಡೆಯದೆ ಸಿಎಂ ವಿಧೇಯಕಗಳನ್ನು ಮಂಡಿಸಿರುವ ಬಗ್ಗೆ ಆಕ್ಷೇಪಿಸಿದ್ದರು. ಸಂಪುಟ ಅನುಮೋದನೆ ಇಲ್ಲದೆ ಮುಖ್ಯಮಂತ್ರಿಗಳು ಮಂಡಿಸುವುದು ಅನಿವಾರ್ಯವಾದರೆ ಕಾರ್ಯ ಕಲಾಪಗಳ ನಿರ್ವಹಣೆ ನಿಯಮಗಳಿಗೆ ಸಂಪುಟ ಸಭೆಯಲ್ಲಿ ತಿದ್ದುಪಡಿ ತರಲು ಸೂಚನೆ ನೀಡಿದ್ದರು. ಅಂತೆಯೇ ಸಂಪುಟ ಒಪ್ಪಿಗೆ ಇಲ್ಲದೆ ವಿಧೇಯಕ ಮಂಡಿಸಲು ಸಿಎಂಗೆ ಪರಮಾಧಿಕಾರ ನೀಡಲು ಕಾರ್ಯಕಲಾಪ ನಿರ್ವಹಣೆ ನಿಯಮಕ್ಕೆ ತಿದ್ದುಪಡಿ ತರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.