ಹಾವೇರಿ: ಯಾವುದು ಶಾಶ್ವತವಲ್ಲ, ಈ ಬದುಕೇ ಶಾಶ್ವತವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಸ್ಥಾನಮಾನ ಶಾಶ್ವತವಲ್ಲ ಎಂದು ತಿಳಿಸಿದ್ದಾರೆ. ಅವರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ನಾವು ಎಷ್ಟು ದಿನ ಇರುತ್ತೇವೆ ಎನ್ನುವುದು ಗೊತ್ತಿಲ್ಲ. ಪ್ರೀತಿ ವಿಶ್ವಾಸದ ಮುಂದೆ ಅಧಿಕಾರ ಮಹತ್ವದಲ್ಲ ಎಂದು ಬಸವರಾಜ ಬೊಮ್ಮಾಯಿ ಭಾವುಕರಾಗಿ ಮಾತನಾಡಿದ್ದು, ಸ್ವಕ್ಷೇತ್ರದಲ್ಲೇ ಸಿಎಂ ಇಂತಹ ಹೇಳಿಕೆ ನೀಡಿರುವುದು ಮುಖ್ಯಮಂತ್ರಿ ಬದಲಾವಣೆಯ ಸೂಚನೆಯೇ ಎನ್ನುವುದು ಚರ್ಚೆಗೆ ಕಾರಣವಾಗಿದೆ.
ಪಕ್ಷದ ಆಂತರಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳು ನಿಜವಾಗಬಹುದೇ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ಜನವರಿಯಲ್ಲಿ, ಸಂಕ್ರಾಂತಿಯಲ್ಲಿ ಕ್ರಾಂತಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಭಾವ್ಯ ಬದಲಾವಣೆ ಊಹಿಸಿ ಸಿಎಂ ಇಂತಹ ಹೇಳಿಕೆ ನೀಡಿರಬಹುದೆಂದು ಹೇಳಲಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ಇಂತಹ ಮಾತುಗಳನ್ನಾಡಿದ್ದರು. ಆದರೆ, ಸದ್ಯಕ್ಕೆ ಬಸವರಾಜ ಬೊಮ್ಮಾಯಿ ಬದಲಾವಣೆ ಇಲ್ಲವೆಂದು ಪಕ್ಷದ ನಾಯಕರೇ ಸ್ಪಷ್ಟಪಡಿಸಿದ್ದರೂ, ಸ್ವಕ್ಷೇತ್ರದಲ್ಲಿ ಇಂದು ಅವರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.