ಬೆಂಗಳೂರು: ವಿಧಾನಸಭೆಯಲ್ಲಿ ಜೈನಮುನಿ ಹತ್ಯೆ ಪ್ರಕರಣ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಸದಸ್ಯರು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಇದೊಂದು ಸಾಮಾನ್ಯ ವ್ಯಕ್ತಿಯ ಕೊಲೆಯಲ್ಲ, ಪೊಲೀಸರು ಈ ರೀತಿ ಭಾವಿಸಿದ್ದಾರೆ. ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಗಳಿವೆ ಸೂಕ್ತ ತನಿಖೆಗೆ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ನಮಗೆ ಪೊಲೀಸರ ಸಾಮರ್ಥ್ಯದ ಬಗ್ಗೆ ಆಕ್ಷೇಪ ಇಲ್ಲ. ಆದರೆ ಕೆಲವೊಮ್ಮೆ ಬೇರೆ ಒತ್ತಡ ಬಂದಾಗ ಏನೂ ಮಾಡಲು ಆಗುವುದಿಲ್ಲ ಎಂದರು.
ಅರಗ ಜ್ಞಾನೇಂದ್ರ ಹೇಳಿಕೆಗೆ ಗರಂ ಆದ ಸಿಎಂ ಸಿದ್ದರಾಮಯ್ಯ, ಅರಗ ಜ್ಞಾನೇಂದ್ರ ಅವರೇ ನೀವು ಗೃಹ ಸಚಿವರಾಗಿ ಕೆಲಸ ಮಾಡಿದ್ದೀರಿ. ಒತ್ತಡಕ್ಕೆ ಏನೋ ನಡೆದು ಬಿಡುತ್ತದೆ ಅಂದರೆ ಏನು? ಆ ರೀತಿ ನಿಮ್ಮ ಅವಧಿಯಲ್ಲಿ ಇತ್ತೇನ್ರೀ? ಎಂದು ಗುಡುಗಿದರು. ಯಾರ ಪ್ರಭಾವಕ್ಕೂ ಮಣಿಯುವ ಪ್ರಶ್ನೆ ಇಲ್ಲ, ನಿಸ್ಪಕ್ಷಪಾತವಾಗಿ ತನಿಖೆ ನಡೆಯುತ್ತದೆ ಎಂದು ಹೇಳಿದರು.