ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ವಿಳಂಬ ವಿಚಾರವಾಗಿ ಸದನದಲ್ಲಿ ಬಿಜೆಪಿ ನಾಯಕರ ವಾಗ್ದಾಳಿ, ಪ್ರತಿಭಟನೆಗಳಿಗೆ ಗರಂ ಆದ ಸಿಎಂ ಸಿದ್ದರಾಮಯ್ಯ, ಚರ್ಚೆಗೆ ಅವಕಾಶ ನೀಡದಿದ್ದರೂ ಪದೇ ಪದೇ ಬಿಜೆಪಿ ಸದಸ್ಯರು ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ. ರಾಜ್ಯದ ಜನರು ನಿಮ್ಮ ವರ್ತನೆ ನೋಡುತಿದ್ದಾರೆ ಎಂದು ಗುಡುಗಿದರು.
ವಿಧಾನಸಭಾ ಕಲಾಪದ ವೇಳೆ ಶಾಸಕ ಆರ್.ಅಶೋಕ್ ಉಚಿತ ಬಸ್ ವಿಚಾರವಾಗಿ ಮಾತನಾಡುತ್ತಿದ್ದಂತೆ ಶಾಸಕ ಯತ್ನಾಳ್, ಸುನೀಲ್ ಕುಮಾರ್ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಮಧ್ಯಪ್ರವೇಶ ಮಾಡಿದ ಸಿಎಂ ಸಿದ್ದರಾಮಯ್ಯ, ಚರ್ಚೆಗೆ ಅವಕಾಶ ನೀಡಿಲ್ಲ ಆದರೂ ಬಿಜೆಪಿ ನಾಯಕರು ಎದ್ದೆದ್ದು ನಿಂತು ಗಲಾಟೆ ಮಾಡುತ್ತಿದ್ದೀರಿ. ಮಹಿಳೆಯರಿಗೆ ಉಚಿತ ಬಸ್ ಕಲ್ಪಿಸಿದ್ದೇ ತಪ್ಪು ಎನ್ನುವ ರೀತಿ ಆರ್.ಅಶೋಕ್ ಮಾತನಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಪರ ಇದ್ದಿರೋ, ವಿರೋಧವಿದ್ದೀರೋ ಬಿಜೆಪಿಯವರು ಮೊದಲು ಹೇಳಲಿ ಎಂದರು.
ಅಧಿವೇಶನ ಆರಂಭವಾಗಿ ಮೂರು ದಿನವಾದರೂ ಕಲಾಪ ನಡೆಸಲು ಬಿಡುತ್ತಿಲ್ಲ, ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ ನಿಮಗೆ…. ನೀವೆಲ್ಲರೂ ಸೇರಿ ಎದ್ದು ನಿಂತರೂ ನಾವು ಹೆದರಲ್ಲ. ಕೊಟ್ಟ ಭರವಸೆಯಂತೆ ನೂರಕ್ಕೆ ನೂರರಷ್ಟು ಗ್ಯಾರಂಟಿ ಯೋಜನೆ ಜಾರಿಗೆ ತರ್ತೇವೆ. ಬಿಜೆಪಿಯವರು ಏನು ಭರವಸೆ ಕೊಟ್ಟಿದ್ದರು? ಎಷ್ಟು ಈಡೇರಿಸಿದ್ದಾರೆ ಎಲ್ಲವೂ ಜನರಿಗೆ ಗೊತ್ತಿದೆ. ಅದಕ್ಕೆ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಿ ಕಳುಹಿಸಿದ್ದಾರೆ. ಆದರೂ ನಿಮಗೆ ಬುದ್ಧಿ ಬಂದಿಲ್ಲವಲ್ಲ ಏನು ಹೇಳುವುದು… ಎಂದು ಗದರಿದರು.