ಬೆಂಗಳೂರು: ನಾವು ಜನರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ನಾನು ಅವಕಾಶ ವಂಚಿತರ ಪರವಾಗಿ ಹೊರಾಟ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕೇತೋಹಳ್ಳಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು ನನ್ನ ಕೊನೇ ಚುನಾವಣೆ ಎಂದು ಹೇಳಿದ್ದೆ. ಚುನಾವಣೆಯಿಂದ ನಿವೃತ್ತಿ ಪಡೆಯುತ್ತೇನೆ ಅಷ್ಟೇ, ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ನಾನು ಜನರ ಪರವಾಗಿ ಇರುತ್ತೇನೆ, ಹೋರಾಟ ಮಾಡುತ್ತೇನೆ ಎಂದು ರಾಜಕೀಯ ನಡೆ ಬಗ್ಗೆ ಸ್ಪಷ್ಟಪಡಿಸಿದರು.
ಇದೇ ವೇಳೆ ತಮ್ಮ ಹಳೆಯ ದಿನಗಳ ಬಗ್ಗೆ ಮೆಲುಕು ಹಾಕಿದ ಸಿಎಂ, ಅಂದು ಅಂಬಾಸಿಟರ್ ಕಾರು ಇತ್ತು. ಆಗ ಚುನಾವಣೆಯಲ್ಲಿ ಸೋತಿದ್ದೆ. ಬೇರೆ ಕೆಲಸ ಇರಲಿಲ್ಲ. ಆಗ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿದ್ದೆ ಎಂದು ಹೇಳಿದರು.
1988ರಲ್ಲಿ ಕನಕದಾಸರ 500ನೇ ಜಯಂತಿ ಆಚರಿಸಲಾಯಿತು. ಆಗ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ನಾನು ಸಚಿವನಾಗಿದ್ದೆ. ಅಂದು ಇಡೀ ವರ್ಷ ಕನಕ ಜಯಂತಿ ಆಚರಿಸಬೇಕು ಎಂದು ಹೇಳಿದ್ದೆ. ಅದೇ ವೇಳೆ ಕನಕ ಗುರು ಪೀಠ ಸ್ಥಾಪನೆ ಬೇಡಿಕೆ ಇತ್ತು ಎಂದು ಹೇಳಿದರು.