ಬೆಂಗಳೂರು : ವಿಧಾನಸೌಧದಲ್ಲಿ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ ಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು/ ಸರ್ಕಾರ ಮತ್ತು ಜನರ ನಡುವಿನ ಬಾಂಧವ್ಯ ವೃದ್ಧಿ, ಜನರ ಜೀವನಮಟ್ಟ ಸುಧಾರಣೆ ಮತ್ತು ಸ್ಪಂದನಶೀಲ – ಪಾರದರ್ಶಕ ಆಡಳಿತದ ದೃಷ್ಟಿಯಿಂದ ಅಧಿಕಾರಿಗಳಿಗೆ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಸಿಎಂ ಸಿದ್ದರಾಮಯ್ಯ ಸಭೆಯ ಹೈಲೆಟ್ಸ್..!
* ಜಿಲ್ಲಾಧಿಕಾರಿಗಳಿಗೆ ತಾವು ಮಹಾರಾಜರು ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಬೇಕು.
* ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು ಡಿ.ಸಿ, ಎಸ್.ಪಿ ಹಾಗೂ ಸಿ.ಇ.ಒ ಗಳು ಕ್ರಿಯಾಶೀಲತೆಯಿಂದ, ಸಮನ್ವಯತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರದ ಕಾಳಜಿಗಳು ಜನರಿಗೆ ತಲುಪಲು ಸಾಧ್ಯ.
* ರಾಜ್ಯದಲ್ಲಿ ಡೆಂಗ್ಯು ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಿ. ಡಿ.ಸಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ಷಿಪ್ರವಾಗಿ ಕೆಲಸ ಮಾಡಬೇಕು.
* ಇಷ್ಟು ದಿನ ಉದಾಸೀನ, ನಿರ್ಲಕ್ಷ್ಯ, ಕರ್ತವ್ಯಲೋಪಕ್ಕೆ ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವತ್ತಿನಿಂದ ಹಿರಿಯ ಅಧಿಕಾರಿಗಳನ್ನೂ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ.
* ಡಿ.ಸಿ ಹಾಗೂ ಸಿ.ಇ.ಒ ತಮ್ಮ ಜಿಲ್ಲೆಯ ಸಮಗ್ರ ಮಾಹಿತಿಗಳನ್ನು ಅಂಗೈಯಲ್ಲಿ ಇಟ್ಟುಕೊಂಡು ಉತ್ಸಾಹದಿಂದ ಕೆಲಸ ಮಾಡಬೇಕು. ಆಗ ಮಾತ್ರ ಪ್ರಗತಿ ಮತ್ತು ಅಭಿವೃದ್ಧಿಯು ವೇಗ ಕಾಣಲು ಸಾಧ್ಯ.
* ರಾಜಕಾರಣಿಗಳು, ಅಧಿಕಾರಿಗಳ ಅನುಭವದ ಮೇಲೆ ಆಡಳಿತ ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕಿತ್ತು. 40 ವರ್ಷಗಳ ಹಿಂದೆ ಅಧಿಕಾರಿಗಳು ಕೆಲಸ ನಿರ್ವಹಿಸುವ ರೀತಿಗೂ, ಇವತ್ತಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ರೀತಿಗೂ ಹೋಲಿಸಿದರೆ ಕಾರ್ಯಾಂಗ ಮತ್ತು ಶಾಸಕಾಂಗ ಈಗ ಹೆಚ್ಚು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಇದು ಬಹಳ ಬೇಸರದ ಸಂಗತಿ.
* ಕರ್ನಾಟಕ ಗುಡ್ ಗೌರ್ನೆನ್ಸ್ ನಲ್ಲಿ ಮಾದರಿ ರಾಜ್ಯವಾಗಿದೆ ಎನ್ನುವುದನ್ನು ಮರೆಯಬಾರದು. ಈ ಹೆಗ್ಗಳಿಕೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮಗಳ ಮೇಲಿದೆ.
* ಜಿಲ್ಲಾಧಿಕಾರಿಗಳು ಯಾವುದೇ ಜಿಲ್ಲೆಗೆ ಹೋಗುವ ಮೊದಲು ಆಯಾ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳ ಜೊತೆಗೆ ಜಿಲ್ಲೆಯ ಸಮಗ್ರ ಮಾಹಿತಿ ತಿಳಿದುಕೊಳ್ಳಬೇಕು.
* ಜನಸಂಪರ್ಕ, ಜನಸ್ಪಂದನ ಸಭೆಗಳಲ್ಲಿ 15-20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸ್ಥಳೀಯವಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಮಂದಿ ನನ್ನ ಬಳಿಗೆ ಏಕೆ ಬರುತ್ತಾರೆ? ಡಿ.ಸಿ ಹಾಗೂ ಸಿ.ಇ.ಒ ಗಳು ಇರೋದು ಜನಸಂಪರ್ಕ ಸಭೆಗಳಿಗೆ ಬಂದ ಅರ್ಜಿಗಳನ್ನು ಮುಂದಕ್ಕೆ ಕಳಿಸಿ ಮುಚ್ಚಳಿಕೆ ಕೊಟ್ಟು ಕೈತೊಳೆದುಕೊಳ್ಳೋಕಾ? ಪರಿಹಾರ ಕೊಡಿಸುವವರು ಯಾರು? ನೀವು ಸಮಸ್ಯೆಗೆ ಪರಿಹಾರ ಕೊಡಲಿಲ್ಲ ಎಂದು ಜನರು ನನ್ನ ತನಕ ಬಂದಿದ್ದಾರೆ. ಜನರ ಸಮಸ್ಯೆಗಳ ಅರ್ಜಿಗಳು ಸಕಾರಾತ್ಮಕವಾಗಿ ವಿಲೇವಾರಿ ಆಗಿಲ್ಲ, ಗುಣಾತ್ಮಕವಾಗಿ ವಿಲೇವಾರಿ ಆಗಿಲ್ಲ ಅಂದರೆ ಡಿ.ಸಿ ಹಾಗೂ ಸಿ.ಇ.ಒ ಗಳ ವಿರುದ್ಧ ಕ್ರಮ ಖಚಿತ.
* ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಸಮೇತ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಜನರನ್ನು ನೇರ ಭೇಟಿ ಮಾಡುತ್ತಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಕಡೆಯೇ ಉಳಿಯಬೇಕು ಎನ್ನುವ ನನ್ನ ಸೂಚನೆ ಸರಿಯಾಗಿ ಪಾಲನೆ ಆಗುತ್ತಿಲ್ಲ. ಪಿ.ಡಿ.ಒ ಗಳು, ವಿ.ಎ ಗಳು ಕೆಲಸ ಮಾಡುವ ಜಾಗದಲ್ಲೇ ಉಳಿಯಬೇಕು. ಈ ಬಗ್ಗೆ ಡಿ.ಸಿ ಹಾಗೂ ಸಿ.ಇ.ಒ ಗಳು ಗಮನ ಹರಿಸಬೇಕು.
* ಪ್ರತಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಡಿಸಿ, ಸಿ.ಇ.ಓ, ಎಸ್.ಪಿ ಗಳ ಪಾತ್ರ ದೊಡ್ಡದು. ಈ ಮೂರು ಜನ ಸಮನ್ವಯದಿಂದ ಬೇರೆ ಅಧಿಕಾರಿಗಳನ್ನು ಜೊತೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೆ ಅಭಿವೃದ್ಧಿ ವೇಗವಾಗಿ ಮಾಡಲು ಸಾಧ್ಯ.
* ನಾನು ಮಂತ್ರಿಯಾಗಿ 40 ವರ್ಷಗಳಾದವು. 40ಕ್ಕೂ ಹೆಚ್ಚು ವರ್ಷಗಳಿಂದ ಅಧಿಕಾರಿಗಳ ಕಾರ್ಯ ವೈಖರಿಯನ್ನು ನೋಡುತ್ತಿದ್ದೇನೆ. ರಾಜಕಾರಣಿಗಳು, ಅಧಿಕಾರಿಗಳು ಅನುಭವದ ಮೇಲೆ ಆಡಳಿತ ಹೆಚ್ಚು ಪರಿಣಾಮಕಾರಿಯಾಗಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ.
* ಹಿಂದೆ ಭ್ರಷ್ಟಾಚಾರ ಹೇಗಿತ್ತು, ಇವತ್ತು ಹೇಗಿದೆ ಎಂದು ನೋಡಿದಾಗ, ಕಾರ್ಯಾಂಗ ಮತ್ತು ಶಾಸಕಾಂಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಕಂಡುಬರುತ್ತದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಪರಿಣಾಮಕಾರಿಯಾಗಿ ಕೆಲಸಮಾಡಬೇಕು.
* ಕರ್ನಾಟಕ ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ನೀವು ಕೆಲಸ ಮಾಡುವ ಜಿಲ್ಲೆಯ ಬಗ್ಗೆ ಮೊದಲೇ ತಿಳಿದುಕೊಂಡಿರಬೇಕು. ಅಲ್ಲಿನ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿಗಳ ಬಗ್ಗೆ ಅರಿತುಕೊಳ್ಳಬೇಕು. ಅಲ್ಲಿನ ಸಾಕ್ಷರತೆ, ಶಿಕ್ಷಣ, ತಲಾ ಆದಾಯ ಮೊದಲಾದವುಗಳ ಕುರಿತು ತಿಳಿದಿರಬೇಕು.
* ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 10 ರಷ್ಟು ಕಡಿಮೆಯಾಗಿದೆ. ಪರೀಕ್ಷಾ ಅಕ್ರಮಗಳನ್ನು ನಿಯಂತ್ರಣದಲ್ಲಿಟ್ಟಿರುವುದೇ ಫಲಿತಾಂಶ ಕುಸಿಯಲು ಪ್ರಮುಖ ಕಾರಣವಾಗಲು ಸಾಧ್ಯವಿಲ್ಲ. ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಇದರಲ್ಲಿ ಜಿಲ್ಲಾಧಿಕಾರಿಗಳು, ಸಿಇಓಗಳು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳದ್ದೂ ಜವಾಬ್ದಾರಿ ಇದೆ. ಒಟ್ಟಿಗೆ ಕುಳಿತು ಚರ್ಚೆ ಮಾಡಿ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಬೇಕು.
* ಜಿಲ್ಲಾಧಿಕಾರಿಗಳು ಗಜೆಟಿಯರ್, ಎಕನಾಮಿಕ್ ಸರ್ವೇ ಓದಿದರೆ ಆ ಜಿಲ್ಲೆಯ ಇತಿಹಾಸ, ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಸಾಧ್ಯ. ಪ್ರೇಸರ್ ಎಂಬ ಅಧಿಕಾರಿಯ ಸಲಹೆ ಇಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್, ಗಾಯಕ್ವಾಡ್, ಶಾಹು ಮಹಾರಾಜ ಮೊದಲಾದವರು ಒಳ್ಳೆಯ ಅರಸರೆಂದು ಹೆಸರುಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ಮನೋ ಎಂಬ ಅಧಿಕಾರಿ ಕಲೆಕ್ಟರ್ ಆಗಿದ್ದರು. ಇಂದಿಗೂ ಅಲ್ಲಿನ ಜನ ತಮ್ಮ ಮಕ್ಕಳಿಗೆ ಅವರ ಹೆಸರಿಡುತ್ತಾರೆ. ನಾವೆಲ್ಲರೂ ಜನಸೇವಕರು ಎಂಬ ಭಾವನೆಯಿಂದ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಾಗುತ್ತದೆ.
* ಬಡವರ ಬಗ್ಗೆ ಅನುಕಂಪ ಇರಬೇಕು. ಅಸಮಾನತೆ ನೀಗಿಸಲು ಪ್ರಯತ್ನಿಸಬೇಕು. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರನ್ನು ಓದುತ್ತೇವೆ. ಸಂವಿಧಾನ ಅರಿತುಕೊಳ್ಳಬೇಕು ಎ೦ದು ಹೇಳುತ್ತೇವೆ. ಇದು ಕೇವಲ ಓದುವುದಕ್ಕಲ್ಲ; ಅನುಷ್ಠಾನ ಮಾಡುವುದಕ್ಕೆ ಎಂಬುದನ್ನು ಅರಿತುಕೊಳ್ಳಿ. ಈ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಪರಿಸ್ಥಿತಿ ಬದಲಾದಂತೆ ನಾವೂ ಬದಲಾಗಬೇಕು.
* ಕಲುಷಿತ ನೀರು ಕುಡಿದು ಹಲವು ಸಾವು- ನೋವುಗಳು ಸಂಭವಿಸಿವೆ. ಇಂತಹ ಪ್ರಕರಣಗಳು ಮರುಕಳಿಸಿದರೆ, ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
* ವಲಸೆ ಕುರಿಗಳ ಆಕಸ್ಮಿಕ ಮರಣ ಸಂಭವಿಸಿದಲ್ಲಿ ಮಾಲೀಕರಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು.
* ಸಿಂಧುತ್ವ ಪ್ರಮಾಣ ಪತ್ರ ಸಕಾಲದಲ್ಲಿ ನೀಡಬೇಕು. ಇವುಗಳನ್ನು ಬಾಕಿ ಉಳಿಸಿಕೊಳ್ಳದೆ ಸೂಕ್ತ ಆದೇಶ ಹೊರಡಿಸಬೇಕು. ಅಭ್ಯರ್ಥಿಗಳಿಗೆ ಸಕಾಲದಲ್ಲಿ ಸಿಂಧುತ್ವ ಪ್ರಮಾಣ ಪತ್ರ ನೀಡದೆ ಇದ್ದರೆ ಅವರ ಭವಿಷ್ಯ ಹಾಳಾಗುವುದಿಲ್ಲವೇ?
* ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸದೆ ಬಾಕಿ ಉಳಿದಿರುವ ಪಂಪ್ ಸೆಟ್ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಒದಗಿಸಬೇಕು.
* ಬುಡಕಟ್ಟು ಜನರಿಗೆ ಅರಣ್ಯ ಜಮೀನು ಮಂಜೂರು ಮಾಡಲು 26,126 ಅರ್ಜಿಗಳು ಬಾಕಿ ಇವೆ. ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅವರ ಹಾಡಿಗಳಿಗೆ ಹೋಗಲು ರಸ್ತೆ ಸಂಪರ್ಕ ಇರುವುದಿಲ್ಲ. ಈ ಬಗ್ಗೆ ಸೂಕ್ತ ಸುತ್ತೋಲೆ ಹೊರಡಿಸಿ ಅಗತ್ಯ ಮೂಲಸೌಕರ್ಯ ಒದಗಿಸಿ.
* ರಾಜ್ಯದಲ್ಲಿ 2225 ಗ್ರಾಮಗಳು ಮತ್ತು 20,38,334 ಜನರು ಪ್ರವಾಹ, ಭೂ ಕುಸಿತಕ್ಕೆ ಪ್ರತೀ ವರ್ಷ ತುತ್ತಾಗುತ್ತಾರೆ. ನಿಮ್ಮ ನಿಮ್ಮ ಜಿಲ್ಲೆಗಳಲ್ಲಿನ ಸಂತ್ರಸ್ಥ ಗ್ರಾಮಗಳನ್ನು ಗುರುತಿಸಿ ಅವರಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಈ ವರ್ಷ ಮಳೆಯಿಂದ ಮನೆ, ಬೆಳೆ ಹಾನಿ ಆಗಿರುವವರಿಗೆ ಎಸ್.ಡಿ.ಆರ್.ಎಫ್ ಪ್ರಕಾರ ಪರಿಹಾರವನ್ನು ಕೂಡಲೇ ಇತ್ಯರ್ಥ ಮಾಡಬೇಕು.