ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಅಕಾಲಿಕ ವರ್ಗಾವಣೆಯ ಗುಮ್ಮ ಕಾಡಲಾರಂಭಿಸಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸಾರ್ವತ್ರಿಕ ವರ್ಗಾವಣೆ ವಿಳಂಬವಾಗಿತ್ತು. ಈಗ ಶೀಘ್ರವೇ ಸಾರ್ವತ್ರಿಕ ವರ್ಗಾವಣೆ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಚುನಾವಣೆ ಜವಾಬ್ದಾರಿಯಿಂದ ಅಧಿಕಾರಿಗಳು ಮೂಲ ಸ್ಥಾನಕ್ಕೆ ಮರಳುತ್ತಿದ್ದಾರೆ. ಇದಾದ ಕೂಡಲೇ ಸೀಮಿತ ಅವಧಿಯೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಪುಟ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕಳೆದ ಬಾರಿ ದೀರ್ಘಾವಧಿಗೆ ವರ್ಗಾವಣೆ ಪ್ರಕ್ರಿಯೆ ನಡೆದಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಪಕ್ಷದ ಶಾಸಕರು, ಮುಖಂಡರ ಒತ್ತಾಸೆಯಂತೆ ನಿಗದಿತ ಮಿತಿಯನ್ನು ಮೀರಿ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ನಡೆದಿತ್ತು. ಈ ಬಾರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸಾರ್ವತ್ರಿಕ ವರ್ಗಾವಣೆ ನಡೆದಿರಲಿಲ್ಲ.
ಈ ಸಲ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ ವರ್ಗಾವಣೆ ಮಾಡಲು ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಮುಗಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ವರ್ಗಾವಣೆ ಸಂಬಂಧ ಮಾರ್ಗಸೂಚಿ ಹೊರಬೀಳುವ ಸಾಧ್ಯತೆ ಇದೆ.