ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜುಲೈ 17ರಂದು ತಮ್ಮ ಸರ್ಕಾರದ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸಿದ್ದು, ಇದು ಅವರ ಅಧಿಕಾರಾವಧಿಯ 14ನೇ ಬಾರಿಯ ಬಜೆಟ್ ಮಂಡನೆಯಾಗಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ದಾಖಲೆಯನ್ನು ಹಿಂದಿಕ್ಕುವ ಹಾದಿಯಲ್ಲಿ ಸಿದ್ದರಾಮಯ್ಯನವರಿದ್ದಾರೆ.
ರಾಮಕೃಷ್ಣ ಹೆಗಡೆಯವರು 13 ಬಾರಿ ಬಜೆಟ್ ಮಂಡಿಸಿದ್ದು, ಇದೀಗ ಸಿದ್ದರಾಮಯ್ಯ ತಮ್ಮ ಹದಿನಾಲ್ಕನೇ ಬಾರಿಯ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿಂದೆ ಕಾಂಗ್ರೆಸ್ – ಜೆಡಿಎಸ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ 2005 ರಿಂದ 2007 ವರೆಗಿನ ಅವಧಿಯಲ್ಲಿ ಬಜೆಟ್ ಮಂಡಿಸಿದ್ದರು. ಬಳಿಕ ಜನತಾದಳ ಸರ್ಕಾರದಲ್ಲಿ 1995 ರಿಂದ 2000 ಅವಧಿಯಲ್ಲಿಯೂ ಬಜೆಟ್ ಮಂಡನೆ ಮಾಡಿದ್ದರು. ಈ ರೀತಿ ಅವರು ಒಟ್ಟು ಏಳು ಬಾರಿ ಬಜೆಟ್ ಮಂಡನೆ ಮಾಡಿದ್ದರು.
ನಂತರ 2013 ರಿಂದ 2018 ರವರೆಗೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯನವರು ಆರು ಬಾರಿ ಬಜೆಟ್ ಮಂಡನೆ ಮಾಡಿದ್ದು, ಈವರೆಗೆ 13 ಬಾರಿ ಬಜೆಟ್ ಮಂಡಿಸಿದಂತಾಗಿತ್ತು. ಇದೀಗ ಜುಲೈ 17ರಂದು ಮತ್ತೊಮ್ಮೆ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡುತ್ತಿದ್ದು, ಈ ಮೂಲಕ ಒಟ್ಟು 14 ಬಾರಿ ಅವರು ಬಜೆಟ್ ಮಂಡಿಸಿದಂತಾಗುತ್ತದೆ.