ದಾವಣಗೆರೆ: ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಮುಂದುವರೆಯಲಿದ್ದಾರೆ ಎಂದು ಅವರ ಪರವಾಗಿ ಇಬ್ಬರು ಸಚಿವರು ಬ್ಯಾಟಿಂಗ್ ಮಾಡಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ 5 ವರ್ಷ ಇರುತ್ತಾರೆ. ಮುಂದಿನ ಐದು ವರ್ಷವೂ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಅಧಿಕಾರ ಹಂಚಿಕೆ ಬಗ್ಗೆ ಎಐಸಿಸಿ ನಾಯಕರು ಚರ್ಚೆ ಮಾಡುತ್ತಾರೆ. ರಾಜ್ಯದ ಜನರ ವಿಶ್ವಾಸ ಏನಿದೆಯೋ ನನ್ನದು ಸಹ ಅದೇ ವಿಶ್ವಾಸ. ಮುಖ್ಯಮಂತ್ರಿಯಾಗಿ ಬಡವರ ಕಣ್ಣೀರು ಒರೆಸುವ ನಂಬಿಕೆ ಇಟ್ಟಿದ್ದಾರೆ. ನಂಬಿಕೆಗೆ ಅನುಗುಣವಾಗಿ ಧ್ವನಿ ಇಲ್ಲದವರಿಗೆ ಧ್ವನಿ ನೀಡುತ್ತಾರೆ. ಇಂಥವರು ಸಿಎಂ ಆಗಿ ಹೆಚ್ಚು ಕಾಲ ಇರಬೇಕೆಂಬುದು ನಮ್ಮ ಆಸೆ. ಎಐಸಿಸಿಯವರು ನಾಳೆ ಸಿಎಂ ಸ್ಥಾನ ಬಿಡಿ ಎಂದರೆ ಬಿಡುತ್ತಾರೆ. ಅವರು ಏನು ನಿರ್ಧಾರ ತೆಗೆದುಕೊಂಡಿದ್ದಾರೆಯೋ ಅದರಂತೆ ನಡೆಯುತ್ತಾರೆ ಎಂದು ರಾಜಣ್ಣ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಹೇಳಿಕೆ:
ಸಿದ್ದರಾಮಯ್ಯ, ಡಿ.ಕೆ. ನಡುವೆ ಕುರ್ಚಿ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪರವಾಗಿ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದಾರೆ.
ತಲಾ ಎರಡೂವರೆ ವರ್ಷ ಅಂತ ಇದುವರೆಗೂ ಯಾರೂ ಹೇಳಿಲ್ಲ. ಹೀಗಾಗಿ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ. ಅದು ಪಕ್ಷದ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಸಿದ್ದರಾಮಯ್ಯ ಪರವಾಗಿ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.