ಬೆಂಗಳೂರು : ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದಲೇ ಸೀತೆ, ಲಕ್ಷ್ಮಣ, ಹನುಮಂತನನ್ನು ಬೇರ್ಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆ – ಕಟ್ಟೆಗಳಿಗೆ ಕಾವೇರಿ ನದಿಯ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ ನಂತರ ಮಾತನಾಡಿದರು.ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಾವು ಪೂಜಿಸುವ ರಾಮನ ಜತೆಗೆ ಸೀತೆ, ಲಕ್ಷ್ಮಣ, ಹನುಮಂತ ಇರುತ್ತಾರೆ. ಅದಕ್ಕೆ ನಾವು ಸೀತಾರಾಮ ಎಂದು ಕರೆಯುತ್ತೇವೆ. ಆದರೆ ಬಿಜೆಪಿಯವರು ಸೀತೆ, ಲಕ್ಷ್ಮಣ, ಹನುಮಂತನನ್ನು ಬೇರ್ಪಡಿಸಿದ್ದಾರೆ ಎಂದರು.
ಮಹಾತ್ಮಗಾಂಧಿ ಹೇಳಿದ ರಘು ಪತಿ ರಾಘವ ರಾಜಾರಾಮನನ್ನು ನಾವು ಪೂಜಿಸುತ್ತೇವೆ, ನಾವೂ ರಾಮನನ್ನು ಭಜಿಸುತ್ತೇವೆ. ಜನದ್ರೋಹವನ್ನು ಬಚ್ಚಿಟ್ಟುಕೊಳ್ಳಲು ಶ್ರೀರಾಮನನ್ನು ಮುಂದಿಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿಯನ್ನು ಕ್ಷಮಿಸಬೇಡಿ, ಬೆಂಬಲಿಸಬೇಡಿ. ಧನುರ್ ಮಾಸದಲ್ಲಿ ನಾನೂ ಬೆಳಗ್ಗೆ ಎದ್ದು ದೇವಸ್ಥಾನಕ್ಕೆ ಹೋಗಿ ರಾಮನ ಭಜನೆ ಹಾಡುತ್ತಿದ್ದೆ. ಮೊನ್ನೆ ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದೆ. ಜೈ ಶ್ರೀರಾಮ್ ಅಂತ ಘೋಷಣೆ ಕೂಗಿಸಿದೆʼʼನಾವು ರಾಮನ ಪೂಜೆ ಮಾಡಲ್ವ? ಎಂದು ಹೇಳಿದ ಸಿದ್ದರಾಮಯ್ಯ ಮತ್ತೆ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು.
ದೇವೇಗೌಡರು ಈಗ ಪ್ರದಾನಿ ಮೋದಿ ಮತ್ತು ಬಿಜೆಪಿ ಜತೆ ತಮ್ಮ ಅಸ್ತಿತ್ವಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪ್ರಧಾನಿಗಳಿಗೆ ಹೇಳಿ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಬರ ಪರಿಹಾರವನ್ನು ದೊರಕಿಸಿ ಕೊಡಲಿ. ಜಾತ್ಯತೀತ ಎಂದು ಪಕ್ಷದ ಹೆಸರಿಟ್ಟುಕೊಂಡು ಈಗ ಕೋಮುವಾದಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದರು.