ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಅಧಿವೇಶನ ಪುನರಾರಂಭವಾಗಲಿದೆ. ಉಭಯ ಸದನಗಳಲ್ಲಿ ನಡೆಯುವ ಕಲಾಪದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆ ನಡೆಯಲಿದೆ.
ಈ ನಡುವೆ ವಕ್ಫ್ ಕುರಿತು ಮುಖ್ಯಮಂತ್ರಿಗಳ ಉತ್ತರ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು, ರೈತರ ಸಮಸ್ಯೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು, ಶಿಶುಗಳ ಸರಣಿ ಸಾವು ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.
ಪಂಚಮಸಾಲಿಗಳು, ಹಿಂದೂಗಳ ಮೇಲೆ ಲಾಠಿ ಪ್ರಹಾರ ಸೇರಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ಬಿಜೆಪಿ ಒತ್ತಾಯಿಸಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿಲುಕಿರುವುದರಿಂದ ಸರ್ಕಾರ ವಿಚಲಿತವಾಗಿದೆ. ಹೀಗಾಗಿ ಅಧಿವೇಶನದಲ್ಲಿ ಮುನಿರತ್ನ ಪ್ರಕರಣ, ಕೊರೋನಾ ಹಗರಣ, ಯಡಿಯೂರಪ್ಪ ಪ್ರಕರಣದ ಬಗ್ಗೆ ಪ್ರಸ್ತಾಪಿಸಲು ಮುಂದಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಎರಡನೇ ವಾರದ ವಿಧಾನ ಮಂಡಲ ಅಧಿವೇಶನದಲ್ಲಿ ವಕ್ಫ್ ಆಸ್ತಿ ವಿಚಾರದಲ್ಲಿ ಇಂದು ಸದನದಲ್ಲಿ ಸರ್ಕಾರ ಉತ್ತರ ನೀಡಲಿದೆ. ಸರ್ಕಾರದ ಪರವಾಗಿ ಸಿಎಂ ಸಿದ್ದರಾಮಯ್ಯ, ಸಚಿವ ಕೃಷ್ಣ ಬೈರೇಗೌಡ ಉತ್ತರ ನೀಡಲಿದ್ದಾರೆ. ಉತ್ತರದ ವೇಳೆ ವಿಜಯೇಂದ್ರ ವಿರುದ್ಧದ ಆರೋಪ ಪ್ರಸ್ತಾಪಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯರ ಆರೋಪ ಮಾಡಿದರೆ ಗದ್ದಲ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.