ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗಿದ್ದು, ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಮಲೆನಾಡು ಮತ್ತು ಮೈಸೂರು ವಿಭಾಗದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಕಡಿಮೆಯಿದೆ. ಎಲ್ಲಾ ವಿಭಾಗಗಳು ಮುಂದಿನ ನಾಲ್ಕು ತಿಂಗಳಲ್ಲಿ ಗುರಿಯನ್ನು ಕಡ್ಡಾಯವಾಗಿ ಸಾಧಿಸಲು ಸೂಚಿಸಿದ್ದಾರೆ.
ವಿಜಿಲೆನ್ಸ್ ಹೆಚ್ಚಿಸಿ, ತೆರಿಗೆ ಸೋರಿಕೆಯನ್ನು ಪತ್ತೆ ಹಚ್ಚಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು. ಅಧಿಕಾರಿಗಳು ಬೆಂಗಳೂರು ವಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ವಿಶೇಷ ಅಭಿಯಾನ ಕೈಗೊಂಡು ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ತೆರಿಗೆ ಸ೦ಗ್ರಹವನ್ನು ಹೆಚ್ಚಿಸಿ ಶೇ.100ರಷ್ಟು ಬಜೆಟ್ ಗುರಿಯನ್ನು ಸಾಧಿಸಬೇಕು ಎಂದು ಹೇಳಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ಸ್ವೀಕರಿಸಿದ ಮನವಿಗಳನ್ನು ವಿಲೇವಾರಿ ಮಾಡಿ ತೆರಿಗೆ ಸಂಗ್ರಹ ಕೈಗೊಳ್ಳಬೇಕು. ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ ಶೇ.15ರ ಬೆಳವಣಿಗೆ ದರ ಸಾಧಿಸಿದೆ. ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ 13,722 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.