ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಕೆಲವನ್ನು ಸ್ಥಳದಲ್ಲೇ ಪರಿಹರಿಸಿದರು.
ದೀರ್ಘಾವಧಿಯಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ದಾಖಲು ಮಾಡಿಕೊಂಡು ಆದಷ್ಟು ಶೀಘ್ರ ಬಗೆಹರಿಸಿಕೊಡುವುದಾಗಿ ತಿಳಿಸಿದೆ. ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲಸೌಲಭ್ಯ ಸೇರಿದಂತೆ ಕಾಂಗ್ರೆಸ್ನ ವಿಕಲಚೇತನ ಕಾರ್ಯಕರ್ತರು ಹಲವು ಬೇಡಿಕೆಗಳನ್ನು ನನ್ನ ಮುಂದಿಟ್ಟಿದ್ದಾರೆ. ಇದರ ಜೊತೆಗೆ ವಸತಿ, ಉದ್ಯೋಗ, ವ್ಯಾಪಾರ ನಡೆಸಲು ಸಾಲ ಸೌಲಭ್ಯ, ದಾಖಲೆಗಳ ವರ್ಗಾವಣೆ, ಆರ್ಥಿಕ ನೆರವು ಹೀಗೆ ಹಲವು ಬೇಡಿಕೆಗಳನ್ನು ಪಕ್ಷದ ಇತರೆ ಕಾರ್ಯಕರ್ತರು ಸಲ್ಲಿಸಿದ್ದಾರೆ.
ಸಮಯಾವಕಾಶದ ಕೊರತೆಯಿಂದ ಎಲ್ಲರ ಸಮಸ್ಯೆಗಳನ್ನು ಆಲಿಸಲು ಸಾಕಷ್ಟು ಸಮಯ ನೀಡಲು ಸಾಧ್ಯವಾಗಿಲ್ಲ, ಆದರೆ ನಿಮ್ಮೆಲ್ಲರ ಅಹವಾಲು ನನ್ನ ಕೈಸೇರಿದೆ. ಇಂದು ಸ್ವೀಕರಿಸಲ್ಪಟ್ಟ ಎಲ್ಲಾ ಅಹವಾಲುಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾಲಮಿತಿಯೊಳಗೆ ಸಾಧ್ಯವಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತೇನೆ. ಪಕ್ಷಕ್ಕಾಗಿ ದುಡಿದ ನಿಮ್ಮ ಸಮಸ್ಯೆ ಬಗೆಹರಿಸುವುದು ನನ್ನ ಕರ್ತವ್ಯವೆಂದು ಭಾವಿಸಿ, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.