ಬೆಂಗಳೂರು: ಬಿಬಿಎಂಪಿ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿಯಾನದ ಮಾದರಿಯಲ್ಲಿ ಇ-ಖಾತಾ ನೀಡುವ ಪ್ರಕ್ರಿಯೆ ನಡೆಸಬೇಕು. ಫೆಬ್ರವರಿ 10ರೊಳಗೆ ಇ-ಖಾತಾ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಉಪ ನೋಂದಣಾಧಿಕಾರಿಗಳು ಸ್ಥಳೀಯ ಸಂಸ್ಥೆಗಳು ಇ-ಖಾತಾ ನೀಡಿರುವ ಆಸ್ತಿಗಳನ್ನು ಮಾತ್ರ ನೋಂದಣಿ ಇಲಾಖೆಯ ನೋಂದಣಿ ಮಾಡಬೇಕು. ಸ್ಥಳೀಯ ಸಂಸ್ಥೆಗಳು ನೀಡಿರುವ ಇ-ಖಾತಾ ದಾಖಲೆಗಳ ಡಾಟಾ ಬೇಸ್ ಕಂಪ್ಯೂಟರ್ ನಲ್ಲಿ ಇರಬೇಕು. ಈ ಡಾಟಾಬೇಸ್ ಆಧರಿಸಿ ನೋಂದಣಿ ಪ್ರಕ್ರಿಯೆ ಮಾಡಬೇಕು. ಕಾಗದ ದಾಖಲೆಗಳ ಆಧಾರದಲ್ಲಿ ಯಾವುದೇ ಕಾರಣಕ್ಕೂ ನೋಂದಣಿ ಪರಿಗಣಿಸಬಾರದು ಎಂದು ಸೂಚಿಸಿದ್ದಾರೆ.
ಅನೇಕ ವರ್ಷಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಪರಸ್ಪರ ಹೊಂದಾಣಿಕೆಯಿಂದ ಇಲಾಖೆಗಳು ಕಾರ್ಯನಿರ್ವಹಿಸಬೇಕು. ನಿಯಮ ಪಾಲಿಸದ, ರೆವಿನ್ಯೂ ಬಡಾವಣೆಗಳಿಗೆ ಬ್ರೇಕ್ ಹಾಕುವ ಅಗತ್ಯವಿದೆ. ಒಂದೇ ನಿವೇಶನವನ್ನು ಅನೇಕರಿಗೆ ಮಾರುವ ವಂಚನೆಗೆ ಸಂಪೂರ್ಣ ಬ್ರೇಕ್ ಹಾಕಬೇಕು. ಈ ನಿಟ್ಟಿನಲ್ಲಿ ಇ-ಖಾತಾ ಇಲ್ಲದೆ ನೋಂದಣಿ ಮಾಡಬಾರದು ಎಂದು ಹೇಳಿದ್ದಾರೆ.