ಬೆಂಗಳೂರು: ರಾಜ್ಯದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ ಸಂಬಂಧ ಜನವರಿ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಹೊಸ ಪಿಂಚಣಿ ಯೋಜನೆ(NPS) ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಕುರಿತಾಗಿ ಅಂದು ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎನ್‌ಪಿಎಸ್ ರದ್ದು ಮಾಡುವ ಭರವಸೆ ನೀಡಲಾಗಿತ್ತು. ಜನವರಿ 6ರಂದು ಶನಿವಾರ ನಡೆಯಲಿರುವ ಸಭೆಯಲ್ಲಿ ಎನ್‌ಪಿಎಸ್ ನೌಕರರ ಸಮಾವೇಶದ ದಿನಾಂಕ ನಿಗದಿಪಡಿಸಲಾಗುವುದು. ಸಮಾವೇಶದಲ್ಲಿ ಎನ್‌ಪಿಎಸ್ ರದ್ದು ಮಾಡುವ ಬಗ್ಗೆ ಘೋಷಣೆ ಮಾಡಲಾಗುವುದು.
ಈಗಾಗಲೇ ಅನೇಕ ರಾಜ್ಯಗಳಲ್ಲಿ ಎನ್.ಪಿ.ಎಸ್. ರದ್ದು ಮಾಡಿದ್ದು, ರಾಜ್ಯದಲ್ಲಿಯೂ ಎನ್.ಪಿ.ಎಸ್. ರದ್ದು ಮಾಡಿ ಒಪಿಎಸ್ ಜಾರಿಗೊಳಿಸುವ ಕುರಿತು ಚರ್ಚೆ ನಡೆಸಲು ಶನಿವಾರ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಕಳೆದ ತಿಂಗಳ ನಡೆಯಬೇಕಿದ್ದ ಸಭೆ ಕೆಲಸದ ಒತ್ತಡದ ಕಾರಣಕ್ಕೆ ಮುಂದೂಡಿಕೆಯಾಗಿತ್ತು. ಜನವರಿ 6ರಂದು ಸಂಜೆ 5 ಗಂಟೆಗೆ ಸಭೆ ನಿಗದಿಯಾಗಿದೆ.