
ಬೆಂಗಳೂರು: ತಮ್ಮನ್ನು ಕಡೆಗಣಿಸುತ್ತಿರುವ ಮತ್ತು ಕಾರ್ಯವೈಖರಿ ಸರಿ ಇಲ್ಲದ ಕಾರಣ ಕೆಲವು ಸಚಿವರನ್ನು ಬದಲಾವಣೆ ಮಾಡಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ತಮ್ಮನ್ನು ಕಡೆಗಣಿಸುತ್ತಿರುವ ಸಚಿವರ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಸಚಿವರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವರು ಶಾಸಕರ ಕೈಗೆ ಸಿಗುವುದಿಲ್ಲ. ವರ್ಗಾವಣೆಗೆ ನಾವು ನೀಡಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ನಮ್ಮ ಜಿಲ್ಲೆಗಳಿಗೆ ಬರುವುದೇ ಇಲ್ಲ. ಜಿಲ್ಲಾ ಮಟ್ಟದಲ್ಲಿ ಯಾವುದೇ ಪ್ರಗತಿ ಪರಿಶೀಲನಾ ಸಭೆಗಳನ್ನು ಉಸ್ತುವಾರಿ ಸಚಿವರು ನಡೆಸಿಲ್ಲ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಕೆಲವು ಸಚಿವರನ್ನು ಬದಲಾವಣೆ ಮಾಡಬೇಕು. ಪ್ರಗತಿ ಪರಿಶೀಲನ ಸಭೆ ನಡೆಸಲು ಸೂಚಿಸಬೇಕು. ಶಾಸಕರ ಮನವಿಗಳಿಗೆ ಸ್ಪಂದಿಸಬೇಕು ಎಂದು ಶಾಸಕರು ಆಗ್ರಹಿಸಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ನಮ್ಮ ಶಾಸಕರ ಮನವಿಗಳಿಗೆ ಆದ್ಯತೆ ನೀಡಿ ಸ್ಪಂದಿಸಬೇಕು ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.