ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಶನಿವಾರ ಅಥವಾ ವಾರದಲ್ಲಿ ಯಾವುದಾದರೂ ಒಂದು ದಿನ ರಾಜ್ಯದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರನ್ನು ಭೇಟಿ ಮಾಡಲಿದ್ದಾರೆ.
ಸೆಪ್ಟೆಂಬರ್ 23ರ ಇಂದಿನಿಂದಲೇ ಇದು ಆರಂಭವಾಗಲಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಗೆ ವಿಧಾನಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು, ಸಂಸದರಿಗೆ ಪಕ್ಷಾತೀತವಾಗಿ ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಅನುದಾನ ವಿಚಾರಗಳ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ. ಚಿರಂಜೀವಿ ಪ್ರಕಟಣೆ ನೀಡಿದ್ದಾರೆ. ಮುಂದಿನ ವಾರ ಮುಖ್ಯಮಂತ್ರಿ ಅವರ ಸಮಯ ಅವಕಾಶ ಲಭ್ಯತೆ ಆಧಾರದಲ್ಲಿ ಶಾಸಕರು, ಸಂಸದರಿಗೆ ಸಿಎಂ ಬೇಟಿಗೆ ಅವಕಾಶ ಕಲ್ಪಿಸಲಾಗುವುದು. ಈ ಭೇಟಿ ಕಡ್ಡಾಯವಾಗಿರುವುದಿಲ್ಲ. ಇತ್ತೀಚೆಗೆ ಬಸವರಾಜ ರಾಯರೆಡ್ಡಿ ಸೇರಿದಂತೆ ಕೆಲವು ಶಾಸಕರು ವಿವಿಧ ಸಚಿವರ ವಿರುದ್ಧ ಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದು ಭೇಟಿಗೆ ಅವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಶಾಸಕರ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ.