ಬೆಂಗಳೂರು : ವಿಧಾನಸೌಧದಲ್ಲಿ ಇಂದು (ಸೆ.15) ‘ಸಂವಿಧಾನ ಪೀಠಿಕೆ’ ಓದು ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧ ಮುಂಭಾಗ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಸಚಿವ ಹೆಚ್ ಸಿ ಮಹದೇವಪ್ಪ, ಸಚಿವ ಸತೀಶ್ ಜಾರಕಿಹೊಳಿ. ಸಚಿವ ಕೆ ಹೆಚ್ ಮುನಿಯಪ್ಪ, ಸಚಿವ ಶಿವರಾಜ್ ತಂಗಡಗಿ, ಸಚಿವ ರಾಮಲಿಂಗಾ ರೆಡ್ಡಿ, ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅದೇ ರೀತಿ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾರ್ಥನಾ ಸಮಯದಲ್ಲಿ ಸಂವಿಧಾನ ಪೀಠಿಕೆಯನ್ನು ಓದುವುದು ಹಾಗೂ ಎಲ್ಲರೂ ಸಂವಿಧಾನದ ಪೀಠಿಕೆಗೆ ಬದ್ಧರಾಗುವುದು, ಸಾಂವಿಧಾನಿಕ ತತ್ತ್ವಗಳನ್ನು ತಮ್ಮ ಜೀವನ ಹಾಗೂ ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳಲು ಪ್ರತಿಜ್ಞೆಗೈಯುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಆದೇಶಿಸಿದೆ.
ಸಂವಿಧಾನ ಪೀಠಿಕೆ ಓದುವ ಉದ್ದೇಶ
ಸಂವಿಧಾನವು ಡಾ. ಅಂಬೇಡ್ಕರ್ ಅವರು ನಮಗೆ ನೀಡಿರುವ ಜ್ಞಾನ ದೀವಿಗೆ, ಸಮಾನತೆಯ ದೀವಿಗೆಯಾಗಿದೆ. ಹೀಗಾಗಿ ಸಂವಿಧಾನದ ಪೀಠಿಕೆ ಓದುವುದು ಮಹತ್ವವಾದ ಉದ್ದೇಶ ಹೊಂದಿದ್ದು, ಇದು ವಿದ್ಯಾರ್ಥಿಗಳು ತಮ್ಮ ರಾಷ್ಟ್ರ ನಿರ್ಮಿಸಿರುವ ಮೂಲಭೂತ ತತ್ವಗಳು, ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ದಿನಾಂಕ:15.09.2023 ರಂದು ಬೆಳಿಗ್ಗೆ 10.00 ಗಂಟೆಗೆ ವಿಧಾನ ಸೌಧದ ಮುಂಭಾಗದ ವಿಶಾಲವಾದ ಮೆಟ್ಟಿಲುಗಳು ಮತ್ತು ಪ್ರದೇಶದಲ್ಲಿ ಸಿಎಂ ಸಿದ್ದರಾಮಯ್ಯ 10,000 ವಿದ್ಯಾರ್ಥಿಗಳೊಡನ ಭಾರತದ ಸಂವಿಧಾನ ಪೀಠಿಕೆಯನ್ನು ಓದಲಿದ್ದಾರೆ. ಈ ಹಿನ್ನೆಲೆ ಏಕಕಾಲದಲ್ಲಿ ಆನ್ ಲೈನ್ (Virtual) ಮೂಲಕ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮದಲ್ಲಿ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸುವ ಕುರಿತು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿರುತ್ತದೆ.