ಮಂಡ್ಯ: ಕಳೆದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಗೆದ್ದಿದ್ದು ನಮ್ಮ ಕಾಂಗ್ರೆಸ್ ವೋಟಿನಿಂದ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಸುಮಲತಾ ಅವರಿಗೆ ಅತಿ ಹೆಚ್ಚು ಮತ ಬಿದ್ದಿದ್ದು ಕಾಂಗ್ರೆಸ್ ನಿಂದ. ಗೆದ್ದ ಮೇಲೆ ಸುಮಲತಾ ಅಂಬರೀಶ್ ಬಿಜೆಪಿಗೆ ಸಹಕಾರ ಕೊಟ್ಟಿದ್ದಾರೆ. ಈಗ ಟಿಕೆಟ್ ಗಾಗಿ ತಿಕ್ಕಾಟ ಶುರುವಾಗಿದೆ. ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ ನವರೇ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಮಂಡ್ಯ ಕ್ಷೇತ್ರದ ಜನ ನಮ್ಮ ಕೈಬಿಡುವುದಿಲ್ಲ ಎಂದುಕೊಂಡಿದ್ದೇನೆ. ಯಾರು ಏನು ಬೇಕಾದರೂ ಹೇಳಲಿ, ಸ್ಟಾರ್ ಚಂದ್ರು ಅವರನ್ನು ಲೋಕಸಭೆಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.
ನುಡಿದಂತೆ ನಡೆದವರನ್ನು ಬೆಂಬಲಿಸಿದರೆ ಅಭಿವೃದ್ಧಿ ಆಗುತ್ತದೆ. ಕೊಟ್ಟ ಮಾತಿನಂತೆ ನಡೆಯುವವರನ್ನು ಬೆಂಬಲಿಸಬೇಕು. ನಾವು ಪ್ರಮುಖವಾಗಿ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೆವು. ಅಧಿಕಾರಕ್ಕೆ ಬಂದ ತಕ್ಷಣವೇ ಅನುಷ್ಠಾನಗೊಳಿಸಿದ್ದೇವೆ. ಪ್ರತಿದಿನ 50- 60 ಲಕ್ಷ ಮಹಿಳೆಯರು ಉಚಿತವಾಗಿ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಸಂಚರಿಸುತ್ತಾರೆ. ನಾನು ಈ ಹಿಂದೆ 7 ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್, ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ಟಿದ್ದೆವು. ಆದರೆ ಅವರು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕುಳಿತು ಅಧಿಕಾರ ಕಳೆದುಕೊಂಡರು. ಸಮ್ಮಿಶ್ರ ಸರ್ಕಾರ ಕೆಡವಿದ ಯಡಿಯೂರಪ್ಪ ಜೊತೆಗೆ ಕುಮಾರಸ್ವಾಮಿ ಕೈಜೋಡಿಸಿದ್ದಾರೆ ಎಂದು ಹೇಳಿದ್ದಾರೆ.