ಹೊಸಪೇಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆಯಲ್ಲಿ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿದರು.
ಹಂಪಿ ಉತ್ಸವ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರಕ್ಕೆ ವಿಜಯನಗರ ಕಾಲದ ವೈಭವ ಮತ್ತು ಬಸವಾದಿ ಶರಣರ ಆಶಯಗಳು ಮತ್ತು ಧೀಮಂತ ನಾಯಕರು ಹಾಕಿಕೊಟ್ಟ ಮಾರ್ಗವೇ ಮಾದರಿ. ಆದ್ದರಿಂದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.
ಬಸವಾದಿ ಶರಣರ ಆಶಯ, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ. ಸಹಿಷ್ಣುತೆ, ಸಹಬಾಳ್ವೆ, ಸಂಪತ್ತಿನ ಸಮಾನ ಹಂಚಿಕೆ, ಅವಕಾಶಗಳ ಸಮಾನ ಹಂಚಿಕೆ ಬಸವಾದಿ ಶರಣರು ಮತ್ತು ಅಂಬೇಡ್ಕರ್ ಅವರ ಆಶಯವಾಗಿದೆ. ಈಗ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು. ಪರ ಧರ್ಮಗಳನ್ನು ಗೌರವಿಸಬೇಕು. ಧರ್ಮ – ಧರ್ಮದ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ, ವೈಷಮ್ಯ ಹರಡುವವರನ್ನು ತಿರಸ್ಕರಿಸದೇ ಹೋದರೆ ನಾಡಿನ, ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಸವಣ್ಣನವರ ಆಶಯದ ಸಹಬಾಳ್ವೆ, ಸಹಿಷ್ಣುತೆ ನಮಗೆ, ನಿಮಗೆ ಮಾದರಿಯಾಗಲಿ ಎಂದರು.
ಹಂಪಿ ಗಾಯತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿ, ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವರಾದ ನಾಗೇಂದ್ರ, ಕೆಕೆಆರ್‌ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್, ಮಾಜಿ ಸಂಸದ ಉಗ್ರಪ್ಪ, ಶಾಸಕರುಗಳಾದ ಈ.ತುಕಾರಾಮ್, ಕಂಪ್ಲಿ ಗಣೇಶ್, ಲತಾ ಎಂ.ಪಿ ಪ್ರಕಾಶ್, ರಾಘವೇಂದ್ರ ಹಿಟ್ನಾಳ್ , ನಾರಾ ಭರತ್ ರೆಡ್ಡಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.