ಬೆಂಗಳೂರು: ರಾಜ್ಯದಲ್ಲಿ ವಸತಿ ಇಲಾಖೆಯ ವಿವಿಧ ಯೋಜನೆಗಳಡಿ ನಿರ್ಮಾಣ ಮಾಡುತ್ತಿರುವ 1.6 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿ 2024ರ ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಅಧಿಕಾರಿಗಳೊಂದಿಗೆ ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿಗಳು, ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಾಣ ಮಾಡುತ್ತಿರುವ 52,189 ಮನೆಗಳ ನಿರ್ಮಾಣವನ್ನು ಸರ್ಕಾರದ ಹಣದಿಂದಲೇ ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕೆ ಸಂಪುಟ ಸಭೆ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿವಿಧ ವಸತಿ ಯೋಜನೆಗಳ 3 ಲಕ್ಷ ಮನೆ ನಿರ್ಮಾಣ ಗುರಿ ಹೊಂದಿದ್ದು, 1.31 ಲಕ್ಷ ಮನೆ ನಿರ್ಮಾಣ ಪೂರ್ಣವಾಗಿದೆ. ನಿರ್ಮಾಣ ಹಂತದಲ್ಲಿರುವ 1.6 ಲಕ್ಷ ಮನೆಗಳನ್ನು 2024ರ ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು. ಎಂದು ಹೇಳಿದ್ದಾರೆ.
ಫಲಾನುಭವಿಗಳ ವಂತಿಗೆ 4 ಲಕ್ಷ ರೂಪಾಯಿ ಪಾವತಿಸುವುದು ಬಡವರಿಗೆ ಕಷ್ಟವಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದಾಗ ಪ್ರತಿಕ್ರಿಯೆ ನೀಡಿದ ಸಿಎಂ, ಕೊಳಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೊಂಡಂತೆ ಫಲಾನುಭವಿಗಳು ಒಂದು ಲಕ್ಷ ರೂ. ಮಾತ್ರ ಪಾವತಿಸಿ ಉಳಿದ ಹಣವನ್ನು ಸರ್ಕಾರದಿಂದ ಭರಿಸಿದರೆ ಯೋಜನೆ ಪೂರ್ಣಗೊಳ್ಳಲಿದೆ ಎನ್ನುತ್ತಿರುವುದರಿಂದ ಅಗತ್ಯ ಹೆಚ್ಚುವರಿ ಅನುದಾನ ಕೋರಿ ಸಚಿವ ಸಂಪುಟ ಮುಂದೆ ಪ್ರಸ್ತಾವನೆ ಮಂಡಿಸುವಂತೆ ತಿಳಿಸಿದ್ದಾರೆ.