alex Certify ಕಷ್ಟ ಗೊತ್ತಿರುವ ಹಳ್ಳಿಗಾಡಿನ ಮಕ್ಕಳು ವೈದ್ಯರಾಗಬೇಕು: ಸಿಎಂ ಸಿದ್ಧರಾಮಯ್ಯ ಆಶಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಷ್ಟ ಗೊತ್ತಿರುವ ಹಳ್ಳಿಗಾಡಿನ ಮಕ್ಕಳು ವೈದ್ಯರಾಗಬೇಕು: ಸಿಎಂ ಸಿದ್ಧರಾಮಯ್ಯ ಆಶಯ

ಬೆಂಗಳೂರು: ವೈದ್ಯರು ಕಾಯಿಲೆ ವಾಸಿ ಮಾಡಿದರೆ ಜನ ಸದಾ ನೆನೆಯುತ್ತಾರೆ. ಯಾವುದೇ ಕಾರಣಕ್ಕೂ ವೈದ್ಯರು ರೋಗಿಗಳನ್ನು ನಿರ್ಲಕ್ಷ್ಯ ಮಾಡದೇ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಕಷ್ಟ ಗೊತ್ತಿರುವ ಹಳ್ಳಿಗಾಡಿನ ಮಕ್ಕಳು ವೈದ್ಯರಾಗಬೇಕು, ಆಗ ನಮ್ಮ‌ ಸರ್ಕಾರದ ಆಶಯ ಈಡೇರಲಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ 500 ಹಾಸಿಗೆಗಳ ಸಾಮರ್ಥ್ಯವುಳ್ಳ ನೂತನ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೌರಿಂಗ್ ಆಸ್ಪತ್ರೆ ಸುದೀರ್ಘ ಇತಿಹಾಸವನ್ನು ಹೊಂದಿರುವ ಆಸ್ಪತ್ರೆ. ಸಾವಿರಾರು ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸಿದೆ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಮತ್ತೊಂದು ವೈದ್ಯಕೀಯ ಕಾಲೇಜಿನ ಅಗತ್ಯವನ್ನು ಮನಗಂಡು ಮತ್ತೊಂದು ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದ್ದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಮತ್ತೊಂದು ವೈದ್ಯಕೀಯ ಕಾಲೇಜು ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೂ ಆಗಿ, ಸಾಮಾನ್ಯ ಜನರಿಗೆ, ಬಡವರಿಗೆ, ದಲಿತರಿಗೆ ಬಹಳಷ್ಟು ಉಪಯೋಗವಾಗುತ್ತದೆ ಎಂದು ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದ್ದೆ. ಈಗ ಸುಸಜ್ಜಿತವಾದ ವೈದ್ಯಕೀಯ ಕಾಲೇಜು ನಿರ್ಮಾಣವಾಗಿ ಜನರಿಗೆ ಸೇವೆ ನೀಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಾಗಿ ಬರುವವರು ಶ್ರೀಮಂತ ವರ್ಗದವರಲ್ಲ. ಸಾಮಾನ್ಯವಾಗಿ ಬಡವರು, ಕೆಳವರ್ಗದವರು ಮಾತ್ರ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಬಡವರು ದುಬಾರಿ ವೆಚ್ಚವನ್ನು ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸರ್ಕಾರಿ ಆಸ್ಪತ್ರೆಗಳು ಅಗತ್ಯವಿದೆ. ನನ್ನನ್ನೂ ಒಳಗೊಂಡಂತೆ ಬಹುತೇಕ ರಾಜಕಾರಣಿಗಳು ಸರ್ಕಾರಿ ಆಸ್ಪತ್ರೆಗೆ ಹೋಗುವುದಿಲ್ಲ. ಹಣವಿರುವವರು ಎಲ್ಲಿಗೆ ಬೇಕಾದರೂ ಹೋಗಿ ಚಿಕಿತ್ಸೆ ಪಡೆಯಬಹುದು. ಆದರೆ ಬಡವರು ಎಲ್ಲಿಗೆ ಹೋಗಲು ಸಾಧ್ಯ? ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಜೀವಿಸುವ ಹಕ್ಕಿದೆ ಎಂದು ಸ್ಪಷ್ಟವಾಗಿ ತಿಳಸಲಾಗಿದೆ. ರಾಜ್ಯದ ಏಳು ಕೋಟಿ ಜನರೂ ಆರೋಗ್ಯವಾಗಿರಬೇಕು, ಇದೇ ನಮ್ಮ ಆಶಯ ಎಂದು ತಿಳಿಸಿದ್ದಾರೆ.

ಹಿಂದೆಲ್ಲಾ ಸಕ್ಕರೆ ಕಾಯಿಲೆ, ರಕ್ತದೊತ್ತಡ ಶ್ರೀಮಂತರ ಕಾಯಿಲೆ ಎನ್ನುತ್ತಿದ್ದರು. ಈಗ ಬಡವರಿಗೆ ಹಾಗೂ ಸಣ್ಣ ವಯಸ್ಸನವರಿಗೂ ಬರಲು ಶುರುವಾಗಿದೆ. ಊಟದ ಕ್ರಮದಲ್ಲಿ ಬದಲಾವಣೆಯಾಗಿದ್ದು, ದೈಹಿಕ ವ್ಯಾಯಾಮ ಕೂಡ ಇಲ್ಲವಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ರೀಡೆಗಳಲ್ಲಿ ಇರಲೇಬೇಕು. ಕ್ರೀಡಾಪಟುಗಳಿಗೂ ಸಾಮಾನ್ಯ ಜನರಿಗೂ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಆರೋಗ್ಯ ಬಹಳ ಮುಖ್ಯ. ವಯಸ್ಸಿಗೆ ಸರಿಯಾಗಿ ದೈಹಿಕ ವ್ಯಾಯಾಮವಿಲ್ಲದೆ, ಆಹಾರ ಪದ್ದತಿಯನ್ನು ಉತ್ತಮವಾಗಿಟ್ಟುಕೊಳ್ಳದೇ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ ಎಂದರು.

ನನ್ನನ್ನು ವೈದ್ಯನಾಗಿ ನೋಡಬೇಕೆಂದು ನನ್ನ ತಂದೆಗೆ ಆಸೆಯಿತ್ತು. ಆದರೆ ನನಗೆ ಉತ್ತಮ ಅಂಕಗಳು ಬರದ ಕಾರಣ ನಾನು ವಕೀಲನಾದೆ. ನನಗೆ ವೈದ್ಯಕೀಯ ಸೀಟು ಸಿಕ್ಕಿದ್ದಿದ್ದರೆ ನಾನು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ.

ಹಿಂದೆ ನಾನು ಹಣಕಾಸು ಮಂತ್ರಿಯಾಗಿದ್ದಾಗ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ತೀರ್ಮಾನ ಮಾಡಲಾಗಿತ್ತು. ಈಗ ಪ್ರಸ್ತುತ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸಮುದಾಯದವರಿಗೂ ಪ್ರಾತಿನಿಧ್ಯ ದೊರಕಲು, ಇಂತಹ ಆಸ್ಪತ್ರೆಗಳಲ್ಲಿ ವೈದ್ಯರು ಕಾರ್ಯನಿರ್ವಹಿಸಲು  ಮೀಸಲಾತಿ ವ್ಯವಸ್ಥೆಯಾಗುತ್ತದೆ. ಸೂಕ್ತ ಅವಕಾಶ ದೊರೆತರೆ, ಎಲ್ಲರೂ ಜೀವನದಲ್ಲಿ ಅಭಿವೃದ್ಧಿ ಹೊಂದಬಹುದಾಗಿದೆ. ಸಮಾಜದಲ್ಲಿ ಅಶಕ್ತರಿಗೆ ಬದುಕುವ ಅವಕಾಶವನ್ನು ಸರ್ಕಾರ ಕಲ್ಪಿಸುತ್ತಿದೆ ಎಂದರು.

300 ಕೋಟಿ ರೂ. ವೆಚ್ಚದಲ್ಲಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ಶಂಕುಸ್ಥಾಪನೆ ಮಾಡಿ, ನಮ್ಮ ಅವಧಿಯಲ್ಲಿಯೇ ಉದ್ಘಾಟನೆಯನ್ನೂ ನೆರವೇರಿಸಲಾಗುವುದು. ಉತ್ತಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಪಾಲಿಸುವುದರಿಂದ ಸದೃಢ ಆರೋಗ್ಯವನ್ನು ಪಡೆಯಬಹುದಾಗಿದೆ. ಕ್ಯಾನ್ಸರ್ ರೋಗಕ್ಕೆ ಆರಂಭಿಕ ಹಂತದಲ್ಲಿದ್ದರೆ ಗುಣಪಡಿಸಬಹುದಾಗಿದೆ. ವೈಜ್ಞಾನಿಕ ಸಂಶೋಧನೆಗಳಿಂದ ಅನೇಕ ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲಾಗುತ್ತಿದೆ ಎಂದು ಹೇಳಿದರು.

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ವಹಣೆ, ಸ್ವಚ್ಚತೆ ಉತ್ತಮವಾಗಿರಬೇಕು, ಉತ್ತಮ ಆರೋಗ್ಯ ಸೇವೆ ದೊರೆಯುವಂತಾಗಬೇಕು. ಉತ್ತಮ ಜನಸಂಪರ್ಕ ಹೊಂದುವುದರಿಂದ ಆಸ್ಪತ್ರೆಗೆ ಸಾರ್ವಜನಿಕರಿಂದ ದೇಣಿಗೆಯೂ ದೊರೆಯಲಿದೆ, ಆ ಮೂಲಕ ಗುಣಮಟ್ಟದ ಸೇವೆಗಳನ್ನು ಆಸ್ಪತ್ರೆ ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಶಾಸಕರಾದ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಬಾಲ ಭವನ ಅಧ್ಯಕ್ಷ ಬಿ.ಆರ್.ನಾಯ್ಡು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...