ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿಯ ವರ್ಗಾವಣೆ ದಂಧೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಮಾಜಿ ಮುಖ್ಯಮತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಇಂದು ಕೂಡ ಪತ್ರಿಕಾಗೋಷ್ಠಿ ಕರೆದು ಸುಳ್ಳು ಸುಳ್ಳು ಆರೋಪ ಮಾಡಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಅವರು ಚರ್ಚೆ ಮಾಡಲಿ, ಆಗ ಉತ್ತರ ಕೊಡುತ್ತೇವೆ. ಸರ್ಕಾರ ಓಡಿಹೋಗುವುದಿಲ್ಲ. ಕುಮಾರಸ್ವಾಮಿಯವರು ಯಾವಾಗ ಸತ್ಯ ಹೇಳಿದ್ದಾರೆ? ಯಾವಾಗಲೂ ಹಿಟ್ ಅಂಡ್ ರನ್ ಕೇಸ್ ಅವರದ್ದು. ಸುಳ್ಳನ್ನೆಲ್ಲಾ ತನಿಖೆ ಮಾಡಿಸಲು ಆಗುವುದಿಲ್ಲ. ಏನಾದರೂ ಆಧಾರ ಇದ್ದರೆ, ದಾಖಲಾತಿ ಇದ್ದರೆ ತನಿಖೆ ಮಾಡಬಹುದು. ಹೆಚ್.ಡಿ ಕುಮಾರಸ್ವಾಮಿಯವರು ಅವರ ಭ್ರಷ್ಟಾಚಾರಗಳ ಬಗ್ಗೆ ತನಿಖೆ ಮಾಡುವಂತೆ ಸವಾಲು ಹಾಕಿದ್ದಾರೆ. ತನಿಖೆ ಮಾಡಬೇಕಾಗಿ ಬಂದರೆ ಮಾಡುತ್ತೇವೆ, ಅದರಲ್ಲಿ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿಯಾಗಲಿ, ನಮ್ಮ ಪಕ್ಷದವರಾಗಲಿ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಬರಪರಿಹಾರ ನೀಡುವ ಸಂಬಂಧ ಕೇಂದ್ರವನ್ನು ಹಲವು ಬಾರಿ ಒತ್ತಾಯಿಸಿದ್ದೇವೆ. ಕೇಂದ್ರದಿಂದ 17,900 ಕೋಟಿ ರೂ.ಗಳ ಬರಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿ ಒಂದು ತಿಂಗಳಾದರೂ ಕೂಡ ವರದಿಯನ್ನು ನೀಡಿಲ್ಲ ಹಾಗೂ ನಮ್ಮ ಸರ್ಕಾರದ ಮನವಿಗೆ ಕೇಂದ್ರ ಇದುವರೆಗೂ ಸ್ಪಂದಿಸಿಲ್ಲ. ಬರಪರಿಹಾರ ರಾಜ್ಯಕ್ಕೆ ನೀಡುವ ಭಿಕ್ಷೆಯಲ್ಲ. ಎನ್.ಡಿ.ಆರ್.ಎಫ್ ನಡಿ ಪರಿಹಾರವನ್ನು ನೀಡಬೇಕಿದ್ದು, ಅದನ್ನು ರಾಜ್ಯ ನೀಡಿರುವ ತೆರಿಗೆಯ ಮೊತ್ತವೇ ಆಗಿದೆ. ಬರಪರಿಹಾರಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.
ಬೇರೆ ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ನಾಯಕರು ಕರ್ನಾಟಕವನ್ನು ಟೀಕೆ ಮಾಡುತ್ತಿದ್ದಾರೆ. ಅದಕ್ಕೆ ಅವರು ಮಧ್ಯ ಪ್ರದೇಶದಲ್ಲಿ ನನ್ನ ಹಾಗೂ ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಮಂತ್ರಿಗಳು ನಮ್ಮ ಗ್ಯಾರಂಟಿಗಳಿಗೆ ವಿರೋಧ ಮಾಡಿದ್ದರು. ಈಗ ‘ವಿಕಸಿತ್ ಭಾರತ್’ ಎಂದು ವ್ಯಾನ್ ಕಳಿಸಿ ಅದರಲ್ಲಿ ಪ್ರಧಾನಮಂತ್ರಿಗಳ ಗ್ಯಾರಂಟಿ ಎಂದು ಬರೆದಿದ್ದಾರೆ. ಅದನ್ನು ಭಾರತದ ಸರ್ಕಾರ ಕಳುಹಿಸಿದೆ. ಮೊದಲು ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿ ಈಗ ಅವರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇದನ್ನು ರಾಜಕೀಯ ಇಬ್ಬಂದಿತನ ಎಂದು ಕರೆಯದೆ ಬೇರೇನು ಹೇಳಬೇಕು? ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.