ಬೆಂಗಳೂರು: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.
3927 ಎಎನ್ಎಂ ಖಾಲಿ ಹುದ್ದೆಗಳ ಪೈಕಿ 1205 ಹಾಗೂ 2990 ಹೆಚ್ಐಒ ಹುದ್ದೆಗಳ ಪೈಕಿ 300 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಅಗತ್ಯ ಸೇವೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ವಿಳಂಬ ಮಾಡಬೇಡಿ. ನೀಡಿದ್ದಾರೆ. ಹೆಣ್ಣು ಬ್ರೂಣ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಂಬಂಧಿಸಿದೆ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ತಾಯಂದಿರ ಮರಣ ಅನುಪಾತ ಕಡಿಮೆ ಇದೆ. ದೇಶಕ್ಕೆ ಹೋಲಿಸಿದರೆ ಮರಣ ಅನುಪಾತ ರಾಜ್ಯದಲ್ಲಿ ಕಡಿಮೆ ಇದ್ದು, 2018 -20ರ ಅವಧಿಯಲ್ಲಿ ರಾಜ್ಯದಲ್ಲಿ 1 ಲಕ್ಷಕ್ಕೆ 69, ದೇಶದ ಅನುಪಾತ 97 ಇದೆ. 2021- 24ರಲ್ಲಿ ಇದರ ಪ್ರಮಾಣ ರಾಜ್ಯದಲ್ಲಿ 55ಕ್ಕೆ ಇಳಿಕೆಯಾಗಿದೆ. ತಾಯಂದಿರ ಮರಣ ತಡೆಗೆ ಎಲ್ಲಾ ಕ್ರಮ ಕೈಗೊಳ್ಳಬೇಕು. ಹೆರಿಗೆಯ ಪ್ರಮಾಣಕ್ಕೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ತಜ್ಞರನ್ನು ನಿಯೋಜಿಸಬೇಕು. ಅರವಳಿಕೆ ತಜ್ಞರನ್ನು ನೇಮಕ ಮಾಡಬೇಕು. ಇದಕ್ಕಾಗಿ ಹೆರಿಗೆ ಪ್ರಮಾಣವಿರುವ ಆಸ್ಪತ್ರೆಗಳ ವೈದ್ಯಾಧಿಕಾರಿಗಳನ್ನು ಪುನರ್ ನಿಯೋಜನೆ ಮಾಡಬೇಕು. ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಲಭ್ಯತೆ ಖಾತ್ರಿಪಡಿಸಬೇಕು. ಔಷಧ ಖರೀದಿ ಪ್ರಕ್ರಿಯೆ ಇನ್ನಷ್ಟು ಪಾರದರ್ಶಕಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.