alex Certify ಸುಳ್ಳುರಾಮಯ್ಯ ಬಿರುದಾಂಕಿತ ನೀವು ಕೊನೆಗೂ ಸತ್ಯ ನುಡಿದಿದ್ದೀರಿ: ಕಾಂಗ್ರೆಸ್ ಮತಗಳಿಂದಲೇ ಸುಮಲತಾ ಗೆದ್ದಿದ್ದರು ಎಂಬ ಸಿಎಂ ಹೇಳಿಕೆಗೆ HDK ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಳ್ಳುರಾಮಯ್ಯ ಬಿರುದಾಂಕಿತ ನೀವು ಕೊನೆಗೂ ಸತ್ಯ ನುಡಿದಿದ್ದೀರಿ: ಕಾಂಗ್ರೆಸ್ ಮತಗಳಿಂದಲೇ ಸುಮಲತಾ ಗೆದ್ದಿದ್ದರು ಎಂಬ ಸಿಎಂ ಹೇಳಿಕೆಗೆ HDK ಪ್ರತಿಕ್ರಿಯೆ

ಬೆಂಗಳೂರು: ಕಾಂಗ್ರೆಸ್ ಮತಗಳಿಂದಲೇ ಸುಮಲತಾ ಅಂಬರೀಶ್ ಗೆದ್ದಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಸುಳ್ಳುರಾಮಯ್ಯ ಬಿರುದಾಂಕಿತರಾದ ನೀವು ಕೊನೆಗೂ ಸತ್ಯ ನೋಡಿದಿದ್ದೀರಿ ಎಂದು ಟ್ವಿಟರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸುಳ್ಳುರಾಮಯ್ಯನೆಂಬ ಖ್ಯಾತಿಯಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೀರಿ, ನಿಮಗೆ ಅಭಿನಂದನೆಗಳು. ಸತ್ಯ ಗಂಟಲಲ್ಲಿ ಸಿಕ್ಕಿಕೊಂಡ ಬಿಸಿ ತುಪ್ಪದಂತೆ. ಕಕ್ಕಲೇ ಬೇಕು. 2019 ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದು ಸ್ವತಃ ನೀವೇ ಒಪ್ಪಿಕೊಂಡಿದ್ದೀರಿ. ನೀವು ಹೇಳಿದಂತೆ ಬಿಜೆಪಿಯಿಂದ ಗೆದ್ದಿಲ್ಲ. ಕಾಂಗ್ರೆಸ್ ನಿಂದ ಗೆದ್ದಿದ್ದಾರೆ ಇದಲ್ಲವೇ ನಂಬಿಕೆ ದ್ರೋಹ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಿಮ್ಮ ಗೋಮುಖ ವ್ಯಾಘ್ರತನ ಅರಿಯಲು ಇಷ್ಟು ಸಾಕೆಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅಂದು ಕಾಂಗ್ರೆಸ್ ಮೈತ್ರಿ ಪಕ್ಷ, ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ. ಪ್ರಚಾರದ ಸೋಗಿನ ನಾಟಕವಾಡಿ ಗೆಲ್ಲಿಸುತ್ತೇವೆ ಎಂದು ಪೋಸು ಕೊಟ್ಟಿದ್ದೀರಿ. ನಿಖಿಲ್ ಸುತ್ತ ಶಕುನಿವ್ಯೂಹವನ್ನೇ ರಚಿಸಿದ ಕಲಿಯುಗ ಶಕುನಿ ನೀವಲ್ಲದೆ ಮತ್ಯಾರು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ಸಕ್ಕರೆ ಕಾರ್ಖಾನೆ ಬಗ್ಗೆ ಹೇಳಿದ್ದೀರಿ. ಬಜೆಟ್‌ ನಲ್ಲಿ ‌ಘೋಷಣೆ ಮಾಡಿದ್ದೀರಿ, ಸರಿ. ದುಡ್ಡು ಎಲ್ಲಿಟ್ಟಿದ್ದೀರಿ? ನಾನು 2019ರ ಬಜೆಟ್‌ ನಲ್ಲಿಯೇ ಈ ಕಾರ್ಖಾನೆಗೆ 100 ಕೋಟಿ ರೂ. ತೆಗೆದಿರಿಸಿದ್ದೆ. ಎಲ್ಲಿ ಹೋಯಿತು ಆ ದುಡ್ಡು? ಇದರ ಬಗ್ಗೆ ಗ್ಯಾರಂಟಿ ಸಮಾವೇಶದಲ್ಲಿ ಚಕಾರ ಎತ್ತಿಲಿಲ್ಲವೇಕೆ ಸಿದ್ದರಾಮಯ್ಯನವರೇ? ಇಂಥ ಆತ್ಮವಂಚನೆ ಏತಕ್ಕೆ? ಎಂದು ಪ್ರಶ್ನಿಸಿದ್ದಾರೆ.

ತನ್ನ ತಲೆಗೇ ಹರಳೆಣ್ಣೆ ಇಲ್ಲ, ಪಕ್ಕದವನಿಗೆ ಸಂಪಂಗೆಣ್ಣೆ ಕೊಟ್ಟನಂತೆ ನಿಮ್ಮಂಥವನೊಬ್ಬ! ನಿಮ್ಮ ವೈಖರಿ ಹಾಗಿದೆ. ಕನ್ನಡಿಗರು ಬರದ ಬೆಂಕಿಯಲ್ಲಿ ಬೇಯುತ್ತಿದ್ದರೆ ನಿಮ್ಮ ಸರಕಾರ ಕದ್ದೂಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ! ಒಂದು ಕೈಲಿ ಅಗ್ಗದ ಗ್ಯಾರಂಟಿ ಕೊಟ್ಟು ಹತ್ತು ಕೈಗಳಲ್ಲಿ ಬದುಕಿನ ಗ್ಯಾರಂಟಿ ಕಿತ್ತುಕೊಳ್ಳುತ್ತಿದ್ದೀರಿ? ಇದು ನ್ಯಾಯವೇ? ಎಂದು ಟೀಕಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...