
ಬೆಂಗಳೂರು: ಆ. 16ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ವಿಧಾನಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಅವರು ಚಾಲನೆ ನೀಡಿ, ಮಾತನಾಡಿದರು.
ಆ. 16 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರದಲಿದೆ. ವಿರೋಧಪಕ್ಷದವರು ಅನ್ನಭಾಗ್ಯ ವಿಚಾರದಲ್ಲಿ ಟೀಕೆ ಮಾಡುತ್ತಾರೆ. ಅಕ್ಕಿ ಕೊಡದ ಕೇಂದ್ರ ಸರ್ಕಾರದ್ದು ದ್ವೇಷದ ರಾಜಕಾರಣ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರದ ಅಕ್ಕಿಯನ್ನು ಈಗ ಯಾರೂ ಖರೀದಿ ಮಾಡಲು ಸಿದ್ದರಿಲ್ಲ. ನಾವೇನು ಪುಕ್ಕಟೆಯಾಗಿ ಅಕ್ಕಿ ಕೇಳಿರಲಿಲ್ಲ. ಕೇಂದ್ರ ಸರ್ಕಾರದಿಂದ ಬಡವರಿಗೆ ದ್ರೋಹ ಮಾಡುವ ಕೆಲಸ ನಡೆದಿದೆ ಎಂದು ಟೀಕಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿ ಖಾತೆಗೆ ಮಾಸಿಕ ಎರಡು ಸಾವಿರ ರೂಪಾಯಿ ಜಮಾ ಮಾಡಲಾಗುವುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 16 ರಿಂದ ಚಾಲನೆ ನೀಡಲಾಗುವುದು.