ಕೊಡಗು : ಕಾಫಿ ಬೆಳೆಗಾರರಿಗೆ 10 HP ಉಚಿತ ವಿದ್ಯುತ್ ನೀಡುವ ಬಗ್ಗೆ ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲನೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕೊಡಗಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘’ಕೊಡಗಿನ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ಉಚಿತ ವಿದ್ಯುತ್ ನೀಡುವ ಬಗ್ಗೆ 2008 ರಿಂದಲೂ ಬೇಡಿಕೆ ಇದೆ. ಹಿಂದೆ ಬಿಜೆಪಿ ಶಾಸಕರೇ ಇಲ್ಲಿ ಆಯ್ಕೆಯಾಗಿದ್ದರು. ಅವರದೇ ಸರ್ಕಾರ ಇದ್ದಾಗ ಬೋಪಯ್ಯ, ಅಪ್ಪಚ್ಚು ರಂಜನ್ ಅವರು ಏನು ಮಾಡುತ್ತಿದ್ದರು? ಸಂಸದರೂ ಅವರೇ ಇದ್ದಾರೆ, ಆದರೂ ಗಮನ ಕೊಟ್ಟಿಲ್ಲ. ನಮ್ಮ ಸರ್ಕಾರ ಈ ಮನವಿಯನ್ನು ಗಂಭೀರವಾಗಿ ಪರಿಶೀಲಿಸಲಿದೆ’’ ಎಂದಿದ್ದಾರೆ.
ಸರ್ಕಾರ ಬಂದ 7 ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೆ ತಂದಿದ್ದೇವೆ. ಇದರಿಂದ ಕರ್ನಾಟಕದ ಬಡವರು ಮತ್ತು ಮಧ್ಯಮ ವರ್ಗದ ಜನರ ಸಂಕಷ್ಟ ಕಡಿಮೆ ಆಗಿದೆ. ರಾಜ್ಯದಲ್ಲಿ ಬರಗಾಲ ಬಂದಿದೆ. ಬಿಜೆಪಿ ಸಂಸದರು ಕೇಂದ್ರದಿಂದ ರಾಜ್ಯಕ್ಕೆ ಒಂದು ರುಪಾಯಿ ಬರ ಪರಿಹಾರವನ್ನೂ ತರಲಿಲ್ಲ. ರೈಲು ಬಿಡುವುದರಲ್ಲಿ ಮಾತ್ರ ಪ್ರತಾಪ ತೋರಿಸುವ ಮಿಸ್ಟರ್ ಪ್ರತಾಪ್ ಸಿಂಹ ರಾಜ್ಯದ ಬರ ಪರಿಹಾರಕ್ಕೆ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಸಿಲಿಲ್ಲ ಏಕೆ? ಎಂದು ಕಿಡಿಕಾರಿದರು.