ಕೊಪ್ಪಳ: ತುಂಗಭದ್ರಾ ಜಲಾಶಯದ ಅಚ್ಚು ಕಟ್ಟು ಪ್ರದೇಶದಲ್ಲಿ ರೈತರಿಗೆ ಹಿಂಗಾರು ಬೆಳೆಗೆ ನೀರು ಒದಗಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಿದ ಸಿಎಂ ಕೊಪ್ಪಳ ತಾಲೂಕಿನ ಗಿಣಿಗೇರಾ ಏರ್ ಸ್ಟ್ರೀಪ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತುಂಗಭದ್ರಾ ಜಲಾಶಯ ಮತ್ತೆ ಭರ್ತಿಯಾಗಿದೆ. ಮುಂಗಾರು ಮತ್ತು ಹಿಂಗಾರು ಬೆಳಗ್ಗೆ ನೀರು ಸಿಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಎರಡನೇ ಬೆಳೆಗೆ ನೀರು ಕೊಡುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ.
ತುಂಗಭದ್ರಾ ಗೇಟ್ ದುರಸ್ತಿ ಕಾರ್ಯವನ್ನು ಬಹಳ ಜಾಗ್ರತೆಯಿಂದ ಮಾಡಲಾಗಿತ್ತು. ಎಲ್ಲರ ಶ್ರಮದಿಂದ 20ಕ್ಕೂ ಹೆಚ್ಚು ಟಿಎಂಸಿ ನೀರು ಉಳಿತಾಯವಾಗಿದೆ. ತಜ್ಞರ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ತುಂಗಭದ್ರಾ ಜಲಾಶಯ ಮತ್ತೆ ತುಂಬಿದ್ದು, ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ನೀರು ಸಿಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಬೇರೆ ರಾಜ್ಯಕ್ಕಿಂತ ಹಾಲಿನ ದರ ಕಡಿಮೆ ಇದೆ ಎಂದು ಮಾಗಡಿಯಲ್ಲಿ ಶಾಸಕರು, ರೈತರು ಹೇಳಿದ್ದರು. ಒಂದು ವೇಳೆ ಹಾಲಿನ ದರ ಜಾಸ್ತಿ ಮಾಡಿದರೆ ಅದನ್ನು ರೈತರಿಗೇ ಕೊಡಬೇಕು ಎಂದು ತಿಳಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ.