ಬೆಂಗಳೂರು: ನಾನು ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು? ಯಾವ ಆಧಾರದ ಮೇಲೆ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶ್ನಿಸಿದ್ದು, ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ನಾವು ಬಡವರ ಪರ ಇದ್ದೇವೆ ಎಂದು ಟಾರ್ಗೆಟ್ ಮಾಡುತ್ತಿದ್ದಾರೆ. ರಾಜ್ಯಪಾಲರು ಈ ರೀತಿ ಮಾಡ್ತಾರೆಂದು ನಮಗೆ ಗೊತ್ತಿತ್ತು. ಇದರಿಂದ ನಾವು ಇನ್ನೂ ಗಟ್ಟಿಯಾಗುತ್ತಿದ್ದೇವೆ. ಇದರಿಂದ ಬಿಜೆಪಿ, ಜೆಡಿಎಸ್ ನವರು ಬಯಲಿಗೆ ಬರುತ್ತಾರೆ ಎಂದು ಹೇಳಿದ್ದಾರೆ.
ನಾನು ಕಾನೂನು ಹೋರಾಟ ಮಾಡಲು ಸಿದ್ಧವಿದ್ದೇನೆ. ಸಚಿವರು ನನ್ನ ಬೆನ್ನಿಗಿದ್ದಾರೆ. ನಾವು ಮತ್ತಷ್ಟು ಗಟ್ಟಿಯಾಗಿದ್ದೇವೆ. ನನಗೆ ಪಕ್ಷ, ಕಾರ್ಯಕರ್ತರು, ಶಾಸಕರು, ಸಂಪುಟ ಸಹೋದ್ಯೋಗಿಗಳು ಒಕ್ಕೊರಲಿನಿಂದ ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದು, ನನ್ನ ಜೊತೆಗೆ ಹೈಕಮಾಂಡ್ ಕೂಡ ನಿಂತಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ತೀರ್ಮಾನ ಕಾನೂನು ಬಾಹಿರವಾಗಿದೆ. ಅದಕ್ಕೆ ಕಾನೂನಿನ ಬಲ ಇಲ್ಲ. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ. ಕೇಂದ್ರದ ಬಿಜೆಪಿ ಪ್ರತಿನಿಧಿಯಾಗಿ ರಾಜ್ಯಪಾಲರು ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.