ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂದು ಹೇಳಿಕೊಂಡು ವ್ಯಕ್ತಿಯೋರ್ವ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ರಾಮಯ್ಯ ಆರೋಗ್ಯಾಧಿಕಾರಿಯನ್ನೇ ವಂಚಿಸಿರುವ ಆರೋಪಿ. ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀ ವಂಚನೆಗೊಳಗಾದವರು. ಸಿಎಂ ಆಪ್ತ ಎಂದು ಹೇಳಿಕೊಂಡು ರಾಮಯ್ಯ ಎಂಬಾತ ಜಯಶ್ರೀ ಅವರಿಗೆ 7 ಲಕ್ಷ ರೂಪಾಯಿ ವಂಚಿಸಿದ್ದಾನೆ.
2023ರ ಸೆಪ್ಟೆಂಬರ್ ನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ಹುದ್ದೆಗಾಗಿ ಜಯಶ್ರೀ ಎಮ್ಮಿ ಹಾಗೂ ಶಾಸಕ ಹೆಚ್.ವೈ.ಮೇಟಿ ಅಳಿಯ ರಾಜ್ ಕುಮಾರ್ ನಡುವೆ ಜಟಾಪಟಿ ನಡೆದಿತ್ತು. ಈ ವೇಳೆ ರಾಜ್ ಕುಮಾರ್ ಯರಗಲ್ ಒಂದು ದಿನ ಡಿಹೆಚ್ ಓ ಕುರ್ಚಿಯಲ್ಲಿ ಕುಳಿತಿದ್ದರು. ತಮ್ಮ ಕುರ್ಚಿಯಲ್ಲಿ ಕುಳಿತಿದ್ದ ರಾಜ್ ಕುಮಾರ್ ಯರಗಲ್ ರನ್ನು ಕಂಡು ಜಯಶ್ರೀ ಕುರ್ಚಿ ಬಿಡುವಂತೆ ಸೂಚಿಸಿದ್ದರು. ಅದಕ್ಕೆ ಅವರು ಇಂದಿನಿಂದ ನಾನೇ ಡಿಹೆಚ್ ಓ. ಸರ್ಕಾರದಿಂದ ಆದೇಶ ತಂದಿದ್ದೇನೆ ಎಂದಿದ್ದರು. ಈ ವೇಳೆ ತಮ್ಮ ವರ್ಗಾವಣೆ ತಡೆಗಾಗಿ ಜಯಶ್ರೀ ಹಿರಿಯ ಅಧಿಕಾರಿಗಳ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದರು.
ವಿಧಾನಸೌಧಕ್ಕೆ ಅಧಿಕಾರಿಗಳ ಭೇಟಿಗೆ ತೆರಳಿದ್ದ ವೇಳೆ ರಾಮಯ್ಯ ಎಂಬಾತ ತಾನು ಸಿಎಂ ಆಪ್ತ ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದ. ಅಲ್ಲದೇ ತಾನು ಕೆ ಎ ಎಸ್ ಅಧಿಕಾರಿ ಎಂದು ತಿಳಿಸಿದ್ದ. ಈ ವೇಳೆ ಜಯಶ್ರೀ ಡಿಹೆಚ್ ಓ ಹುದ್ದೆಗಾಗಿ ನಡೆದ ಕಿತ್ತಾಟವನ್ನು ಆತನ ಬಳಿ ಹೇಳಿಕೊಂಡಿದ್ದರು. ತಾನು ಸಮಸ್ಯೆ ಬಗೆಹರಿಸುವುದಾಗಿ ಹೇಳಿ ರಾಮಯ್ಯ ಮೊದಲು 50 ಸಾವಿರ ರೂಪಾಯಿ ಪಡೆದುಕೊಂಡಿದ್ದ. ಬಳಿಕ ಹಂತ ಹಂತವಾಗಿ 7 ಲಕ್ಷ ಹಣ ಪಡೆದು ನಾಪತ್ತೆಯಾಗಿದ್ದಾನೆ. ಬಳಿಕ ಯಾವುದೇ ಸಂಪರ್ಕಕ್ಕೂ ರಾಮಯ್ಯ ಸಿಗದಿದ್ದಾಗ ಮೋಸ ಹೋಗಿದ್ದನ್ನು ಅರಿತಿದ್ದಾರೆ. ಹಣ ಕಳೆದುಕೊಂಡ ಆರೋಗ್ಯಾಧಿಕಾರಿ ಜಯಶ್ರೀ ಬೆಂಗಳೂರು ಸಿಸಿಬಿ ಕಚೇರಿಯಲ್ಲಿ ರಾಮಯ್ಯ ವಿರುದ್ಧ ದೂರು ನೀಡಿದ್ದಾರೆ.