ಬೆಂಗಳೂರು: ನವೆಂಬರ್ 25 ರಂದು ಸೋಮವಾರ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ ಆಯೋಜಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಲಿರುವ ಮಕ್ಕಳ ಪ್ರತಿನಿಧಿಗಳು ಮಕ್ಕಳ ಸಮಸ್ಯೆಗಳನ್ನು ಸಿಎಂ ಸಿದ್ದರಾಮಯ್ಯ ಅವರ ಮುಂದಿಡಲಿದ್ದಾರೆ.
ಮಕ್ಕಳ ಸಮಸ್ಯೆಗಳ ಕುರಿತು ಮಕ್ಕಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸುವ ಏಕೈಕ ರಾಜ್ಯ ಕರ್ನಾಟಕವಾಗಿದೆ. 2008ರಿಂದಲೂ ವಿವಿಧ ಸಂಘ-ಸಂಸ್ಥೆಗಳಿಂದ ಮಕ್ಕಳ ಹಕ್ಕುಗಳ ಸಂಸತ್ ಹೆಸರಲ್ಲಿ ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಈ ಬಾರಿ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಯುನಿಸೆಫ್ ಮತ್ತಿತರ ಸಂಘಟನೆಗಳು ವಿಧಾನಸೌಧದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆಯೋಜಿಸಿದೆ. ಸಿಎಂ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಪ್ರತಿ ಜಿಲ್ಲೆಗಳಿಂದ ಚಲಾಯಿಸುವಂತೆ 50ಕೂ ಹೆಚ್ಚು ಮಕ್ಕಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಜಿಲ್ಲೆಯಲ್ಲಿ ನಮ್ಮ ಮಕ್ಕಳ ಸಮಸ್ಯೆ ವಿಚಾರಗಳನ್ನು ತಿಳಿಸಿ ಅವುಗಳಿಗೆ ಪರಿಹರಿಸಲು ಮನವಿ ಮಾಡಲಿದ್ದಾರೆ.
ಪ್ರಮುಖವಾಗಿ ಈ ಬಾರಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು, ಅಪೌಷ್ಟಿಕತೆ, ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳಿಗೆ ನೀಡುತ್ತಿರುವ ವಿವಿಧ ಲಸಿಕೆಗಳು, ಮಕ್ಕಳು ಮತ್ತು ಹವಾಮಾನ ವೈಪರೀತ್ಯ, ನೀರು ಮತ್ತು ಶೌಚಾಲಯ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು.