
ಬೆಂಗಳೂರು: ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನ ಮಾರ್ಚ್ 3 ಸೋಮವಾರದಿಂದ ಆರಂಭವಾಗಲಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ, ಆರೋಪ ಮತ್ತು ಪ್ರತ್ಯಾರೋಪಗಳ ಚರ್ಚೆಗೆ ವೇದಿಕೆ ಸಿದ್ಧವಾಗಿದೆ.
ಗ್ಯಾರಂಟಿ ಸೌಲಭ್ಯ ವಿತರಣೆ ವಿಳಂಬ, ಉದಯಗಿರಿ ಠಾಣೆ ಮೇಲೆ ದಾಳಿ, ಹಾಡಹಗಲೇ ಬ್ಯಾಂಕ್ ಲೂಟಿ, ಮೈಕ್ರೋ ಫೈನಾನ್ಸ್ ಹಾವಳಿ, ಕೆಪಿಎಸ್ಸಿ ಅಕ್ರಮ, ಬಾಣಂತಿಯರ ಸಾವು, ಪ್ರಯಾಣ ದರ ಏರಿಕೆ ಸೇರಿಂದತೆ ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿರುವ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸರ್ಕಾರದ ಮೇಲೆ ಮುಗಿ ಬೀಳಲು ಸಜ್ಜಾಗಿವೆ. ಸರ್ಕಾರವನ್ನು ಸಮರ್ಥಿಸಿಕೊಂಡು ತಕ್ಕ ಉತ್ತರ ನೀಡಲು ಸಚಿವರು ಕೂಡ ಸಜ್ಜಾಗಿದ್ದಾರೆ.
ರಾಜ್ಯಪಾಲರ ಜಂಟಿ ಅಧಿವೇಶನ ಭಾಷಣ ಅದರ ಮೇಲಿನ ಚರ್ಚೆ ವಂದನಾ ನಿರ್ಣಯದ ನಂತರ ಮಾರ್ಚ್ 7ರಂದು ಬಜೆಟ್ ಮಂಡನೆಯಾಗಲಿದೆ. ಮಾರ್ಚ್ 21ರವರೆಗೆ ಅಧಿವೇಶನ ನಡೆಯಲಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ ರಾಜ್ಯಪಾಲರ ಜಂಟಿ ಅಧಿವೇಶನ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಗುರುವಾರ ವಂದನಾ ನಿರ್ಣಯ ಕೈಗೊಳ್ಳಲಾಗುವುದು. ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2025 -26 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಇದು ಅವರು ಮಂಡಿಸಲಿರುವ 16ನೇ ಬಜೆಟ್ ಆಗಿದೆ. ಮಾ. 10 ರಿಂದ 21ರವರೆಗೆ ಬಜೆಟ್ ಮೇಲೆ ವಿಸ್ತೃತ ಚರ್ಚೆ ನಡೆಯಲಿದೆ.