ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಶೀಘ್ರವೇ ಕ್ರೀಡಾಪಟುಗಳಿಗೆ ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ಶೇಕಡ 3ರಷ್ಟು ಮೀಸಲಾತಿ ಇದೆ. ಇತರೆ ಇಲಾಖೆಯಲ್ಲಿ ಶೇಕಡ 2ರಷ್ಟು ಮೀಸಲಾತಿ ನೀಡಲಾಗಿದೆ. ರಾಜ್ಯದ ಕ್ರೀಡಾಪಟುಗಳು ಕಾಮನ್ವೆಲ್ತ್, ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಗೆದ್ದಲ್ಲಿ ಬಹುಮಾನ ನೀಡಲಾಗುತ್ತದೆ ರಾಜ್ಯದ ಕ್ರೀಡಾಪಟುಗಳಿಗೆ ಚಿನ್ನ ಗೆದ್ದರೆ 5 ಕೋಟಿ ರೂಪಾಯಿ, ಬೆಳ್ಳಿ ಗೆದ್ದರೆ 3 ಕೋಟಿ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.